ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆ ವಿರುದ್ಧ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ರಾಜ್ಯದ ವಿವಿಧೆಡೆಯಿಂದ ಸುಮಾರು 1.30 ಲಕ್ಷ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 48 ಸಾವಿರ ಶಾಲೆಗಳು ನಾಳೆ ಬಂದ್ ಆಗಲಿವೆ. ಶಾಲೆಗಳಿಗೆ ಸಾಮೂಹಿಕ ಗೈರು ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಶಿಕ್ಷಕರು ನಿರ್ಧಾರ ಮಾಡಿದ್ದಾರೆ. ಶಿಕ್ಷಕರು ಅನೇಕ ಬಾರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲಾಖೆ ಮೊರೆ ಹೋಗಿದ್ದರು. ಸಚಿವರ ಭೇಟಿಯಿಂದಲೂ ನಿರಾಸೆ ಉಂಟಾಗಿದ್ದರಿಂದ ಬೀದಿಗಿಳಿಯಲು ನಿರ್ಧರಿಸಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಭಾಗಿಯಾಗುವ ಸಾಧ್ಯತೆ ಇದೆ. ಇತ್ತ ನಾಳೆ ಶಾಲೆ ಬಂದ್ ಮಾಡದಂತೆ ಇಲಾಖೆಯಿಂದ ಆದೇಶ ಹೊರಡಿಸಿದೆ. ಆದರೆ, ಇಲಾಖೆಯ ಆದೇಶಕ್ಕೂ ಕ್ಯಾರೆ ಎನ್ನದೇ 1.30 ಲಕ್ಷ ಶಿಕ್ಷಕರಿಂದ ಪ್ರತಿಭಟನ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ನಾಗೇಶ್ ಮಾಹಿತಿ ನೀಡಿದ್ದಾರೆ.