ಬೆಂಗಳೂರು: ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣನ ವಿರುದ್ಧದ ಆರೋಪ ಪ್ರಕರಣವು ಸಾಬೀತಾಗಿದ್ದು, ನಿನ್ನೆಯಷ್ಟೇ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು (ಸಿಸಿಸಿಹೆಚ್-82) ಈ ಬಗ್ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಐಪಿಸಿ ಸೆಕ್ಷನ್ 376(2)(ಕೆ) (ಪ್ರಬಲವಾದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಆರೋಪಕ್ಕೆ ಜೀವಾವಧಿ ಶಿಕ್ಷೆಯ ಜೊತೆಗೆ 5 ಲಕ್ಷ ರೂ. ದಂಡ ಹಾಗೂ ಐಪಿಸಿ ಸೆಕ್ಷನ್ 376(2)(ಎನ್) (ಪದೇ ಪದೇ ಅತ್ಯಾಚಾರ) ಅಡಿ ಅಪರಾಧಕ್ಕೆ ಜೀವನ ಪರ್ಯಂತ ಶಿಕ್ಷೆ ಐದು ಲಕ್ಷವನ್ನು ಕೂಡ ನ್ಯಾಯಾಲಯ ವಿಧಿಸಿದೆ. ಈ ಹತ್ತು ಲಕ್ಷದಲ್ಲಿ 7 ಲಕ್ಷ ಸಂತ್ರಸ್ತೆಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಪ್ರಜ್ವಲ್ ರೇವಣ್ಣ ಶಿಕ್ಷೆ ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಕೋರ್ಟ್ ಹಾಲ್ ಹಾಗೂ ಆವರಣದಲ್ಲಿ ವಕೀಲರು ಕಿಕ್ಕಿರಿದು ನೆರೆದಿದ್ದಾರೆ. ಶಿಕ್ಷೆ ಪ್ರಮಾಣ ಪ್ರಕಟ ಮಾಡುವ ಸಂಬಂಧ ಇಂದು ಬೆಳಗ್ಗೆಯಿಂದಲೇ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆದಿದೆ. ಈ ವೇಳೆ ದೋಷಿಗೆ ಏನಾದರೂ ಹೇಳುವುದು ಇದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪ್ರಜ್ವಲ್, ಚುನಾವಣೆಗೂ 6 ದಿನ ಮುಂಚೆ ವೀಡಿಯೋ ಹರಿಬಿಟ್ಟಿದ್ದಾರೆ. ಇದು ರಾಜಕೀಯ ಪಿತೂರಿಯಾಗಿದೆ. ಸಂತ್ರಸ್ತರು ಯಾರೂ ನೇರವಾಗಿ ದೂರು ದಾಖಲಿಸಿಲ್ಲ. ಇಡೀ ರಾಜ್ಯದಲ್ಲೇ ನನಗೆ ಒಳ್ಳೆಯ ಹೆಸರಿದೆ ಎಂದರು.
ಇದಕ್ಕೆ ನ್ಯಾಯಾಧೀಶರು, ನಿನ್ನ ವಿದ್ಯಾರ್ಹತೆ ಏನು ಎಂದು ಕೇಳಿದಾಗ, ನಾನು ಮೆಕ್ಯಾನಿಕಲ್ ಎಂಜಿನಿಯರ್ ಎಂದು ಪ್ರಜ್ವಲ್ ಉತ್ತರಿಸಿದ ಪ್ರಸಂಗವೂ ನಡೆಯಿತು. ಅಲ್ಲದೇ ಪ್ರಜ್ವಲ್ ವಯಸ್ಸು ಇನ್ನೂ ಚಿಕ್ಕದಾಗಿರುವುದರಿಂದ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿದೆ. ಹಾಗಾಗಿ ನ್ಯಾಯಾಲಯ ಈ ಪ್ರಕರಣವನ್ನು ಅನುಕಂಪದಿಂದ ಗಮನಿಸಿ ಶಿಕ್ಷೆ ಪ್ರಮಾಣ ಕಡಿಮೆಗೊಳಿಸಬೇಕೆಂದು ಪ್ರಜ್ವಲ್ ಪರ ವಕೀಲರು ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ಎಸ್‌ಪಿಪಿ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ ಒಂದರಲ್ಲಿ ಶಿಕ್ಷೆ ಪ್ರಕಟಗೊಂಡಿದೆ. ಇನ್ನೂ ಮೂರು ಪ್ರಕರಣಗಳ ವಿಚಾರಣೆ ಮತ್ತು ತೀರ್ಪು ಬಾಕಿಯಿದ್ದು, ಪ್ರತ್ಯೇಕವಾಗಿ ಶಿಕ್ಷೆ ವಿಧಿಸಲಾಗುವುದು.

