ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ತಲುಪಿಲ್ಲ. ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯ ಮಧ್ಯೆಯೂ ನಿರೀಕ್ಷಿತ ಗುರಿ ಮುಟ್ಟುವುದು ಸಾಧ್ಯವಾಗಿಲ್ಲ. ಹೀಗಾಗಿ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಕೂಗು ಕೇಳಿಬರುತ್ತಿದೆ.

ರಾಜ್ಯ ಕಾಂಗ್ರೆಸ್​​ನಲ್ಲಿ ಒಂದಷ್ಟು ರಾಜಕೀಯ ಏರಿಳಿತದ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗು ಹೆಚ್ಚಾಗುವ ಸಾಧ್ಯತೆ ಇದೆ. ‘ಒನ್ ಮ್ಯಾನ್ ಒನ್ ಪೋಸ್ಟ್’ ಪಾಲಿಸಿಗೆ ಹಿರಿಯ ನಾಯಕರು ಒತ್ತಾಯ ಹೇರಬಹುದು ಎಂದು ಮೂಲಗಳು ತಿಳಿಸಿವೆ.

ನಾಯಕತ್ವ ಬದಲಾವಣೆ ಜತೆಗೆ, ಉನ್ನತಾಧಿಕಾರ ರಚನೆಗೆ ಒತ್ತಾಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಮಧ್ಯೆ, ಆಕಾಂಕ್ಷಿಗಳು ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಿದ್ದಾರೆ. ಪರಿಣಾಮವಾಗಿ ಸಚಿವರ ಖಾತೆಗಳು ಅದಲು ಬದಲಾದರೂ ಆಗಬಹುದು. ಸಮುದಾಯವಾರು ಡಿಸಿಎಂ ಹುದ್ದೆಗಳ ಸೃಷ್ಟಿಗೆ ಮತ್ತೆ ಒತ್ತಾಯ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಗ್ಯಾರಂಟಿ ಯೋಜನೆಗಳ ಪ್ರಭಾವದ ಹೊರತಾಗಿಯೂ ರಾಜ್ಯದಲ್ಲಿ ಕೇವಲ 9 ಸ್ಥಾನಗಳನ್ನಷ್ಟೇ ಗೆಲ್ಲುವುದು ಕಾಂಗ್ರೆಸ್​​ಗೆ ಸಾಧ್ಯವಾಗಿದೆ.

ಈ ಎಲ್ಲ ಬೆಳವಣಿಗೆಗಳು ಪಕ್ಷದ ರಾಜ್ಯ ನಾಯಕತ್ವದಲ್ಲಿ ಬದಲಾವಣೆಯ ಕೂಗು ಎಬ್ಬಿಸಿದರೆ ಅಚ್ಚರಿಯಿಲ್ಲ.