ಬೆಂಗಳೂರು: ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿರುವ ಘಟನೆ ಆನೇಕಲ್‌ನ ನಾರಾಯಣಪುರದ ಗುಳ್ಳಪ್ಪ ಬಡಾವಣೆಯಲ್ಲಿ ನಡೆದಿದೆ.

ಇನ್ಸ್‌ಪೆಕ್ಟರ್ ಪ್ರಕಾಶ್ ಆರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಆಟದಲ್ಲಿ ತೊಡಗಿದ್ದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಗುಳ್ಳಪ್ಪ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಸಾರ್ವಜನಿಕವಾಗಿ ಹಾಡಹಗಲೇ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸಲಾಗುತ್ತಿತ್ತು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ದಾಳಿ ಮಾಡಿದ್ದಾರೆ. ಜೂಜಾಟದ ಪಂದ್ಯಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು 12,720 ರೂಪಾಯಿ ನಗದು ಹಣವನ್ನು ಪೊಲೀಸರು ಸ್ಥಳದಲ್ಲೇ ವಶಪಡಿಸಿಕೊಂಡಿದ್ದಾರೆ.

ಜೂಜಾಟದಲ್ಲಿ ತೊಡಗಿದ್ದ ಎ1 ಶಶಿಕುಮಾರ್, ಎ2 ಮೋಹನ್ ರಾಜ್, ಎ3 ಮಂಜುನಾಥ್ ಮತ್ತು ಎ4 ನವೀನ್ ಎಂಬ ನಾಲ್ಕು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಮೂವರು ಆರೋಪಿಗಳು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು, ಕೇವಲ ಓರ್ವ ವ್ಯಕ್ತಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಪರಾರಿಯಾಗಿರುವ ಉಳಿದ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ.

ಜೂಜಾಟ ದಂಧೆಯಲ್ಲಿ ಭಾಗಿಯಾಗಿದ್ದ ನಾಲ್ಕೂ ಜನ ಆರೋಪಿಗಳ ವಿರುದ್ಧ ಆನೇಕಲ್ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆ (KP Act) ಅಡಿಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.