ಬೆಂಗಳೂರು: ಸೈಬರ್ ವಂಚನೆಯ ಜಾಲದ ಮೇಲೆ ಬೆಂಗಳೂರಿನ ಹುಳಿಮಾವು ಪೊಲೀಸರು ದಾಳಿ ನಡೆಸಿ 11 ಜನ ವಂಚಕರನ್ನು ಬಂಧಿಸಿರುವ ಘಟನೆ ನಡೆದಿದೆ.

ಇನ್ವೆಸ್ಟ್ ಮೆಂಟ್ ಹೆಸರಲ್ಲಿ ಅಪರಿಚಿತರ ಮೊಬೈಲ್ ನಂಬರ್ ಸೇರಿಸಿ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗುತ್ತಿತ್ತು. ವಾಟ್ಸಾಪ್ ಗ್ರೂಪ್ ನಂಬಿದವರಿಗೆ ನಿಯೋ ಸಿಸ್ಟಮ್ ಎಂಬ ಅನಧಿಕೃತ ಆ್ಯಪ್ ಇನ್ ಸ್ಟಾಲ್ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿತ್ತು.

ಅದೇ ಗ್ರೂಪ್ ಅಲ್ಲಿ ವಂಚನೆಯ ಜಾಲದ ಸದಸ್ಯರು ಕೂಡ ಇದ್ದರಿಂದ ಗ್ರೂಪ್ ಆಕ್ಟಿವ್ ಆಗಿತ್ತು. ಹೀಗೆ ಗ್ರೂಪ್ ನಲ್ಲಿ ಬಂದ ನಿಯೋ ಸಿಸ್ಟಮ್ ಎಂಬ ಅನಧಿಕೃತ ಆ್ಯಪ್ ಇನ್ ಸ್ಟಾಲ್ ಮಾಡಿಸಿ ಅದರಲ್ಲಿ ಹಣ ಹೂಡಿಕೆ ಮಾಡಿಸುತ್ತಿದ್ದರು.

ಈ ವಂಚನೆಯ ಜಾಲದ ಬಗ್ಗೆ ತಿಳಿಯಾದ ವ್ಯಕ್ತಿಯೋರ್ವ ಉತ್ತಮ ರಿಟರ್ನ್ ಸಿಗುತ್ತೆ ಎಂಬ ನಂಬಿಕೆಯಿಂದಾಗಿ ಮೂರು ಕೋಟಿ ಇಪ್ಪತ್ತು ಲಕ್ಷ ಹಣವನ್ನ ನಿಯೊ ಸಿಸ್ಟಮ್ ಆ್ಯಪ್ ನಲ್ಲಿ ಹೂಡಿಕೆ ಮಾಡಿದ್ದರು.

ಜನರ ಹಣವನ್ನು ವಿವಿಧ ನಕಲಿ ಬ್ಯಾಂಕ್ ಅಕೌಂಟ್ ಗಳಿಗೆ ಹಣ ಜಮಾ ಮಾಡಿಸಿ ಹೂಡಿಕೆ ಮಾಡುತ್ತಿದ್ದರು, ಹೀಗೆ ಹೂಡಿಕೆ ಮಾಡಿದ ಹಣ ಹಾಗೂ ಲಾಭ ಎರಡೂ ಸಹ ಆಪ್ ನಲ್ಲಿ ತೋರಿಸುತಿತ್ತು. ಇದರಲ್ಲಿ ಬಂದ ಹಣವನ್ನು ಸಂತ್ರಸ್ತ ವ್ಯಕ್ತಿ ವಿತ್ ಡ್ರಾ ಮಾಡಲು ಹೋದಾಗ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯದ್ದ 11 ಜನರನ್ನು ಬಂಧಿಸಲಾಗಿದೆ.

ಇನ್ನು ಬಂಧಿತ ಆರೋಪಿಗಳ ಬಳಿಯಿಂದ 23 ಮೊಬೈಲ್ , 1ಲ್ಯಾಪ್ ಟಾಪ್, 205 ಡೆಬಿಟ್ ಕಾರ್ಡ್ ಮತ್ತು ಚೆಕ್ ಬುಕ್ ಪತ್ತೆಯಾಗಿದೆ. ಈ ದಾಖಲಾತಿಗಳನ್ನು ದುಬೈ ಗೆ ಕಳಿಸಲು ತಯಾರಾಗಿತ್ತು ಎನ್ನಲಾಗಿದೆ.

ಬಳಿಕ ಮತ್ತಷ್ಟು ವಿಚಾರಣೆ ಮಾಡಿದಾಗ ದೆಹಲಿಯಾ ಓಲ್ಡ್ ರಾಜೇಂದ್ರ ನಗರದಲ್ಲಿ ಕಾಲ್ ಸೆಂಟರ್ ಪತ್ತೆ ಮಾಡಲಾಗಿದೆ. ಜನರಿಗೆ ಕರೆ ಮಾಡಿ ಲಿಂಕ್ ಕಳಿಸಿ ಹೂಡಿಕೆ ಮಾಡಿಸುತಿದ್ದ ಆರೋಪಿಗಳು ಒತ್ತಾಯಿಸುತ್ತಿದ್ದರು.

ದೆಹಲಿಯಲ್ಲಿ 38 ಡೆಬಿಟ್ ಕಾರ್ಡ್ 12 ಸಿಮ್ ಕಾರ್ಡ್ 35 ‌ಮೊಬೈಲ್ ಫೋನ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಈ ವೇಳೆ ಆರೋಪಿಗಳಿಂದ ಒಟ್ಟು 4500 ನಕಲಿ ಬ್ಯಾಂಕ್ ಅಕೌಂಟ್ ಗಳ ಮೂಲಕ ಹಣ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

4500 ಬ್ಯಾಂಕ್ ಅಕೌಂಟ್ ಮೂಲಕ ದೇಶದ ವಿವಿಧ ರಾಜ್ಯದ ಜನರಿಗೆ ಅಂದಾಜು 75 ಕೋಟಿಗೂ ಅಧಿಕ ಹಣ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದೆ.