ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಸಿಎನ್ ಮಂಜುನಾಥ್ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲುವಿನತ್ತ ಮುನ್ನಡೆದಿದ್ದಾರೆ.
ಈ ವೇಳೆ ಮಂಜುನಾಥ್ ಮಾತನಾಡಿ, ಜನ ಮತಗಳ ಜೊತೆಗೆ ತಮ್ಮ ಹೃದಯವನ್ನೂ ನನಗೆ ನೀಡಿದ್ದಾರೆ ಎಂದರು. ತಮ್ಮನ್ನು ಗೆಲುವಿನತ್ತ ಕೊಂಡೊಯ್ದ ಬೆಂಗಳೂರು ಗ್ರಾಮಾಂತರದ ಮತದಾರರಿಗೆ ಡಾ. ಮಂಜುನಾಥ್ ಧನ್ಯವಾದ ಸಮರ್ಪಿಸಿದ್ದಾರೆ. ತಮ್ಮ ಗೆಲುವಿನ ಹಿಂದೆ ನಿಂತ ಬಿಜೆಪಿಯ ರಾಷ್ಟ್ರೀಯ ಹಾಗೂ ಸ್ಥಳಿಯ ಮುಖಂಡರು, ಜೊತೆಗೆ ದುಡಿದ ಜೆಡಿಎಸ್ನ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಚುನಾವಣೆ ಹಬ್ಬದ ರೀತಿಯಲ್ಲಿ ಚುನಾವಣೆ ನಡೆಯಿತು. ಜನಶಕ್ತಿಯೇ ಪ್ರಜಾಪ್ರಭುತ್ವದಲ್ಲಿ ಅತ್ಯಂತ ದೊಡ್ಡ ಶಕ್ತಿ ಎಂಬುದನ್ನು ಕ್ಷೇತ್ರದ ಜನತೆ ತೋರಿಸಿದ್ದಾರೆ. ಜನರ ಬಾಯಲ್ಲಿ ನಮ್ಮ ಹೆಸರಿತ್ತು. ಬಾಯಿಯಲ್ಲಿದ್ದ ಹೆಸರು ಬ್ಯಾಲೆಟ್ಗೆ ಬಂತು ಎಂದು ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.
ಎಲ್ಲ ಕ್ಷೇತ್ರಗಳಲ್ಲಿ ಆರೋಗ್ಯ, ಶಿಕ್ಷಣ, ಕೃಷಿ, ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಬೇಕು. ಚುನಾವಣೆ ನಂತರ ಘರ್ಷಣೆ ಆಗಬಾರದು, ಅದೂ ಕೂಡ ಅಭಿವೃದ್ಧಿಯೇ. ಜನರ ಮಾನಸಿಕ ನೆಮ್ಮದಿಯ ಜೀವನ ಮುಖ್ಯ. ಜನ ಸಂತೃಪ್ತಿಯಿಂದ ಇರಬೇಕು.
ಬೆಂಗಳೂರಿನಲ್ಲಿ ನಿಮ್ಹಾನ್ಸ್ ಆರಂಭವಾದಾಗ ಜನಸಂಖ್ಯೆ ಕಡಿಮೆ ಇತ್ತು. ಈಗ ದುಪ್ಪಟ್ಟು ಆಗಿದೆ. ನರರೋಗ ಚಿಕಿತ್ಸೆ ಕೇಂದ್ರದ ಇನ್ನೊಂದು ಶಾಖೆ ತೆರೆಯಬೇಕಿದೆ. ರಸ್ತೆ ಟ್ರಾಫಿಕ್ನಲ್ಲಿ ಶೇ.20 ಮರಣ ಆಗುತ್ತಿದೆ. ಪ್ರತಿ 125 ಕಿಮೀಗೆ ಒಂದು ಕ್ರಿಟಿಕಲ್ ಕೇರ್ ಕ್ಲಿನಿಕ್ ಆಗಬೇಕು. ಹೃದಯಾಘಾತ, ಬ್ರೇನ್ ಸ್ಟ್ರೋಕ್ಗೆ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಸಿಗಬೇಕು ಎಂದರು.

