ಬೆಂಗಳೂರು: ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಪಂಗನಾಮ ಹಾಕಿದ್ದಾರೆ. ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ಕೊಟ್ಟಿದ್ದಾರೆ. ಅವರ ಪ್ರಧಾನಮಂತ್ರಿ ಸ್ಥಾನ ಉಳಿಯಬೇಕು ಅಂದರೆ ಆ ಎರಡು ರಾಜ್ಯಗಳು ಬೇಕು. ಅದಕ್ಕೆ ಅವರಿಗೆ ಕೊಟ್ಟಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.
ನಿರ್ಮಲಾ ಸೀತಾರಾಮನ್ 48.21 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಅದರಲ್ಲಿ 14.01 ಲಕ್ಷ ಕೋಟಿ ರೂ. ಅಷ್ಟು ಸಾಲ ತೆಗೆದುಕೊಳ್ತಿದ್ದಾರೆ. ಕರ್ನಾಟಕಕ್ಕೆ ನಿರಾಸೆಯಾಗಿದೆ. ರಾಜ್ಯದ ಜನರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್‌ಗೆ, ಜಲಮೂಲ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅವರೇ ಘೋಷಣೆ ಮಾಡಿದ್ದ ಹಣ ಕೊಟ್ಟಿಲ್ಲ. ಒಟ್ಟಾರೆಯಾಗಿ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಚೊಂಬು ಕೊಟ್ಟಿದ್ದಾರೆ ಅಂತ ಕಿಡಿಕಾರಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಮಾಡಬೇಕು ಅಂತ ರೈತರು ಬೇಡಿಕೆ ಇಟ್ಟಿದ್ದರು. ಅದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಬಗ್ಗೆ ಬಹಳ ಮಾತಾಡ್ತಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಗೆ ಅನುದಾನ ಕಡಿಮೆ ಮಾಡಿದ್ದಾರೆ.
ಮಧ್ಯಂತರ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 9,409 ಕೋಟಿ ಕೊಟ್ಟಿದ್ರೆ, ಈಗ 6,770 ಕೋಟಿ ಮಾತ್ರ ಕೊಟ್ಟಿದ್ದಾರೆ. ಕರ್ನಾಟಕದ ಐವರು ಮಂತ್ರಿಗಳಿದ್ದರೂ ಏನೂ ಮಾಡಿಲ್ಲ, ಏನೂ ಕೊಟ್ಟಿಲ್ಲ. ಒಟ್ಟಾರೆಯಾಗಿ ರೈತರಿಗೆ ಪಂಗನಾಮ ಹಾಕಿದೆ ವಾಗ್ದಾಳಿ ನಡೆಸಿದ್ದಾರೆ.

