ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ರಾಜ್ಯಪಾಲರು ನೋಟೀಸ್‌ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಬಂದಿರುವ ಮನವಿ ಹಿನ್ನೆಲೆಯಲ್ಲಿ ನೋಟೀಸ್‌ ನೀಡಲಾಗಿದೆ.

ಮುಡಾ ಪ್ರಕರಣದ ಮಾಹಿತಿ ದಾಖಲೆ ಸಹಿತ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ನೋಟೀಸ್ ಕಳಿಸಿದ್ದಾರೆ. ಟಿ.ಜೆ ಅಬ್ರಹಾಂ ಎಂಬ ಸಾಮಾಜಿಕ ಕಾರ್ಯಕರ್ತರು ಈ ಕುರಿತು ಖಾಸಗಿ ದೂರು ಸಲ್ಲಿಸಿದ್ದರು.

ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿಯಲ್ಲಿ ಕೇಳಲಾಗಿತ್ತು. ಮೂರು ದಿನಗಳ ಹಿಂದೆ ದೂರುದಾರ ಟಿ.ಜೆ ಅಬ್ರಹಾಂ ಅವರನ್ನು ಕರೆದು ರಾಜ್ಯಪಾಲರು ಮಾಹಿತಿ ಪಡೆದಿದ್ದರು. ಬಿಜೆಪಿ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿಯಾಗಿ, ಸಿಎಂ ವಿರುದ್ಧ ತನಿಖೆ ಜರುಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟೀಸ್ ಕಳುಹಿಸಲಾಗಿದೆ. ಅಬ್ರಹಾಂ ದೂರಿಗೆ ಸಂಬಂಧಿಸಿ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಕೊಡುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ಈಗಾಗಲೇ ರಾಜ್ಯಪಾಲರು ನೋಟೀಸ್‌ ಕಳುಹಿಸಬಹುದು ಎಂಬ ವದಂತಿಯ ಆಧಾರದಲ್ಲಿ ಕಾಂಗ್ರೆಸ್‌ ಮುಖಂಡರು ಸಿಡಿದೆದ್ದಿದ್ದಾರೆ. ನಿನ್ನೆ ಕಂದಾಯ ಸಚಿವ ಕೃಷ್ಣಭೈರೇಗೌಡರು, ʼರಾಜ್ಯಪಾಲರ ಮೂಲಕ ಸರಕಾರ ಅಸ್ಥಿರಗೊಳಿಸುವ ದಾರಿ ಹಿಡಿದರೆ ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗಲಿದ್ದೇವೆʼ ಎಂದು ಎಚ್ಚರಿಸಿದ್ದರು.

ಇಡಿ ಜೊತೆಗೆ ರಾಜಭವನದ ದುರುಪಯೋಗ ಆಗುತ್ತಿದೆ ಎಂದು ಕಾಂಗ್ರೆಸ್‌ ಸಚಿವರು ಆರೋಪಿಸಿದ್ದರು. ಈ ನಡುವೆ ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಡುವುದರ ವಿರುದ್ಧ ಇಂದು ನಡೆಯುವ ಕ್ಯಾಬಿನೆಟ್‌ ಸಭೆಯಲ್ಲಿ ವಿರೋಧಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ವಾಲ್ಮೀಕಿ ನಿಗಮ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಇಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ಈವರೆಗೂ ಅನುಮತಿ ಕೇಳಿಲ್ಲ.