ಬೆಂಗಳೂರು: ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಲೋಕಸಭಾ ಸಚೇತಕರಾಗಿ ಆಯ್ಕೆ ಮಾಡಿ ನೇಮಕಾತಿ ಆದೇಶವನ್ನು ಬಿಜೆಪಿ ಹೊರಡಿಸಿದೆ.
ಈ ಕುರಿತಂತೆ ಬಿಜೆಪಿಯ ಪಾರ್ಲಿಮೆಂಟರಿ ಆಫೀಸ್ ಸೆಕ್ರೇಟರಿ ಡಾ. ಶಿವ್ ಶಕ್ತಿ ನಾಥ್ ಭಕ್ಷಿ ಅವರು ಲೋಕಸಭಾ ಸ್ಪೀಕರ್ ಅವರಿಗೆ ಪತ್ರದಲ್ಲಿ ಹೆಸರನ್ನು ಆಯ್ಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೋಕಸಭೆಯ ಮುಖ್ಯ ಸಚೇತಕರಾಗಿ ಡಾ.ಸಂಜಯ್ ಜೈಸ್ವಾಲ್ ಅವರನ್ನು ನೇಮಕ ಮಾಡಲಾಗಿದೆ. ಸಚೇತಕರಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ 16 ಮಂದಿಯನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನು ತಮ್ಮನ್ನು ಸಚೇತಕರನ್ನಾಗಿ ನೇಮಕ ಮಾಡಿದ ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಗೆ ಕೋಟಾ ಶ್ರೀನಿವಾಸ್ ಪೂಜಾರಿ ಧನವಾದ ತಿಳಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳಿಯು ನನ್ನನ್ನು ಲೋಕಸಭಾ ಸಚೇತಕ ಹುದ್ದೆಗೆ ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಪ್ರಧಾನಿನರೇಂದ್ರ ಮೋದಿಯವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾರವರಿಗೆ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

