ಬೆಂಗಳೂರು: ರಾಜ್ಯದ ಎಲ್ಲಾ ಜಲಾಶಯಗಳಿಂದ ಒಟ್ಟು 536 ಟಿಎಂಸಿ ನೀರು ಸಂಗ್ರಹವಾಗಿದೆ. ಎಲ್ಲೆಲ್ಲಿ ಅನಾಹುತಗಳು ಆಗಬಹುದು ಎಂಬುದರ ಬಗ್ಗೆ ಗಮನ ಇಟ್ಟಿದ್ದೇವೆ ಅಂತ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಅತಿವೃಷ್ಟಿ ಹಾನಿ ಚರ್ಚೆಗೆ ಸಂಬಂಧಪಟ್ಟಂತೆ ಉತ್ತರ ಕೊಟ್ಟ ಕೃಷ್ಣಬೈರೇಗೌಡ, ಕೆಆರ್‌ಎಸ್‌ಗೆ 44.617 ಕ್ಯುಸೆಕ್ ನೀರು ಹರಿದು ಬರುತ್ತಿದೆ, ಆಲಮಟ್ಟಿ ಜಲಾಶಯಕ್ಕೆ 40.478 ಕ್ಯುಸೆಕ್ ನೀರಿನ ಒಳಹರಿಯುವು ಇದೆ. ಹಾಗಾಗಿ ಎಲ್ಲ ಕಡೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಸರ್ಕಾರ ಜನರ ಜೊತೆ ಇದೆ, ಎಲ್ಲ ಸಮಸ್ಯೆಗಳನ್ನೂ ಪರಿಹಾರ ಮಾಡುತ್ತೇವೆ. ಸೋಮವಾರ ಸಂಪುಟ ಸಭೆ ಇದೆ, ಸಭೆಯಲ್ಲೂ ಮಳೆಹಾನಿ ಚರ್ಚೆ ಮಾಡಿ ಪರಿಹಾರ ಕೊಡುತ್ತೇವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತೆ ಎಂಬ ಮುನ್ಸೂಚನೆ ಜನವರಿಯಲ್ಲೇ ಇತ್ತು.
ಜೂನ್ 1 ರಿಂದ ಇಲ್ಲಿ ತನಕ ವಾಡಿಕೆ ಮಳೆ 365 ಮಿಲಿಮೀಟರ್ ಇರಬೇಕಿತ್ತು, ಆದರೆ 447 ಮಿಲಿ ಮೀಟರ್ ಮಳೆ ಆಗಿದೆ. ಕರಾವಳಿ, ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ ಅಂತ ಮಾಹಿತಿ ನೀಡಿದರು
29 ಆರೈಕೆ ಕೇಂದ್ರಗಳನ್ನ ಸ್ಥಾಪಿಸಲಾಗಿದೆ, 2,331 ಸಂತ್ರಸ್ಥರಿಗೆ ಊಟ, ವಸತಿ, ಉಪಹಾರ ಕೊಡುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಖಾತೆಗೆ 777 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಹಣ ಖರ್ಚಾದ ಕೂಡಲೇ ಮತ್ತೆ ಹಣ ಬಿಡುಗಡೆ ಮಾಡುತ್ತೇವೆ, ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ಕೊಡಲು ಸೂಚಿಸಿದ್ದೇವೆ ಎಂದರು.

