ಬೆಂಗಳೂರು: 16 ವರ್ಷದೊಳಗಿನ ಮಕ್ಕಳಿಗೆ ಶಾಲೆ ಹಾಗೂ ಕಾಲೇಜು ಕ್ಯಾಂಪಸ್ನಲ್ಲಿ ಮೊಬೈಲ್ ಫೋನ್ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಸೋಶಿಯಲ್ ಮೀಡಿಯಾ ಹಾಗೂ ಮಾದಕ ವಸ್ತುಗಳ ವ್ಯಸನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬಹುದೆಂಬ ಸುಳಿವು ದೊರೆತಿದೆ.
ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಸೋಶಿಯಲ್ ಮೀಡಿಯಾ ಗೀಳು ಹೆಚ್ಚಾಗಿದೆ. ದಿನದ ಹಲವಾರು ಗಂಟೆಗಳು ಫೋನ್ನಲ್ಲಿ ಕಳೆಯುವುದರಿಂದ ಓದಿಗೆ ಸಮಯ ಕಡಿಮೆಯಾಗುತ್ತಿದೆ. ಕೆಲವರು ಗೇಮಿಂಗ್, ರೀಲ್ಸ್ ಹಾಗೂ ಚಾಟ್ಗಳಲ್ಲಿ ತಲ್ಲೀನರಾಗುತ್ತಿದ್ದಾರೆ. ಇದರಿಂದ ಮಾನಸಿಕ ಒತ್ತಡ, ನಿದ್ರೆ ಕೊರತೆ ಹಾಗೂ ಅಂಕಗಳಲ್ಲಿ ಕುಸಿತ ಕಾಣಿಸುತ್ತಿದೆ. ಈ ಕಾರಣದಿಂದ ಮೊಬೈಲ್ ಬ್ಯಾನ್ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.
ಇಂದಿನ ದಿನಗಳಲ್ಲಿ ಯುವಕರು ಸೋಶಿಯಲ್ ಮೀಡಿಯಾದದಲ್ಲಿ ಅತಿಯಾಗಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಸಲಹೆ ನೀಡಿ ಎಂದು ಕುಲಪತಿಗಳಿಂದ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಕೇಳಿದ್ದಾರೆ.
ಸರ್ಕಾರದ ಯೋಚನೆ ಪ್ರಕಾರ, ಇದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆ ಮತ್ತು ಕಾಲೇಜು ಕ್ಯಾಂಪಸ್ ಒಳಗೆ ಮೊಬೈಲ್ ಬಳಕೆಗೆ ನಿರ್ಬಂಧ ಇರಬಹುದು. ಮನೆ ಅಥವಾ ಹೊರಗೆ ಬಳಕೆಗೆ ಸಂಪೂರ್ಣ ನಿಷೇಧ ಇರುವುದಿಲ್ಲ ಎಂದು ಹೇಳಲಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಈ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ. ವಿದ್ಯಾರ್ಥಿಗಳ ಗಮನ ಓದಿನತ್ತ ಕೇಂದ್ರೀಕರಿಸಲು ಇದು ಸಹಾಯಕವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಪೋಷಕರ ಸಂಪರ್ಕ ಹೇಗೆ? ಆನ್ಲೈನ್ ಕಲಿಕೆಯ ಅವಶ್ಯಕತೆ ಏನು? ಎಂಬ ಪ್ರಶ್ನೆಗಳೂ ಎದುರಾಗಿವೆ.

