ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಮಹಿಳೆಯ ಜತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಇದೆ ಎಂದು ಬೆದರಿಸಿ ₹1.12 ಲಕ್ಷ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಬೇಗೂರಿನ ದೇವರಚಿಕ್ಕನಹಳ್ಳಿ ನಿವಾಸಿ ರಂಧೀರ್ (29) ದೂರು ನೀಡಿದ್ದಾರೆ
ದೂರುದಾರ ರಂಧೀರ್ ಮೊಬೈಲ್ಗೆ ಡಿ.3ರ ರಾತ್ರಿ 12.30ರ ಸುಮಾರಿಗೆ ಅನಾಮಧೇಯ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ಕರೆ ಮಾಡಿದ್ದ ಮಹಿಳೆ ನಗ್ನವಾಗಿದ್ದು, ರಂಧೀರ್ನನ್ನು ನಗ್ನವಾಗುವಂತೆ ಸೂಚಿಸಿದ್ದಾಳೆ. ಈ ವೇಳೆ ಭಯಗೊಂಡ ರಂಧೀರ್, ಕರೆ ಸ್ಥಗಿತಗೊಳಿಸಿ ಆ ಸಂಖ್ಯೆಯನ್ನು ಡಿಲೀಟ್ ಮಾಡಿದ್ದಾರೆ.
ಡಿ.14ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅನಾಮಧೇಯ ಸಂಖ್ಯೆಯಿಂದ ರಂಧೀರ್ ಮೊಬೈಲ್ಗೆ ವಿಡಿಯೋ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ವಿಡಿಯೋ ಕರೆ ಮಾಡಿದ್ದ ವ್ಯಕ್ತಿ ಖಾಕಿ ಸಮವಸ್ತ್ರದಲ್ಲಿರುವುದು ಕಂಡು ಬಂದಿದೆ. ಆತ ‘ನಾನು ಪೊಲೀಸ್ ಅಧಿಕಾರಿಯಾಗಿದ್ದು, ನೀನು ಮಹಿಳೆ ಜತೆಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ನನಗೆ ದೂರು ಬಂದಿದ್ದು, ನಿನ್ನನ್ನು ಬಂಧಿಸಬೇಕಿದೆ’ ಎಂದು ಹೆದರಿಸಿದ್ದಾನೆ.
ಇದರಿಂದ ಆತಂಕಗೊಂಡ ರಂಧೀರ್, ₹1.12 ಲಕ್ಷ ವರ್ಗಾಯಿಸಿದ್ದಾರೆ. ಅನಾಮಧೇಯ ವ್ಯಕ್ತಿ ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದಾಗ, ರಂಧೀರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.