ಬೆಂಗಳೂರು: ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಆದ್ರೆ, ಕುಮ್ಕಿ ಜಮೀನಿನಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳ ತೆರವು ಕಾರ್ಯಾಚರಣೆಯೂ ಅಸಾಧ್ಯ ಎಂದು ಸಚಿವ ಕೃಷ್ಣ ಬೈರೇಗೌಡ ವಿಧಾನಸಭಾ ಅಧಿವೇಶನದಲ್ಲಿ ತಿಳಿಸಿದ್ದಾರೆ.

ಅಧಿವೇಶನದಲ್ಲಿ ಬಿಜೆಪಿ ನಾಯಕ ವಿ. ಸುನೀಲ್‌ ಕುಮಾರ್‌ ಕುಮ್ಕಿ ಜಮೀನಿನ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದರು. “ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಜಮೀನಿನ ಸಮಸ್ಯೆ ಉಲ್ಬಣಿಸಿದ್ದು, ಸ್ವಾಧೀನದಲ್ಲಿರುವ ಕುಮ್ಕಿ ಜಮೀನಿನನ್ನು ಕಲಂ ನಮೂನೆ 53-57 ಹಾಗು 93 ಸಿಸಿ ಪ್ರಕಾರ ಮಂಜೂರು ಮಾಡಬೇಕು” ಎಂದು ಮನವಿ ಮಾಡಿದರು.

ಬಿಜೆಪಿ ನಾಯಕ ಸುನೀಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, “ಕಾನೂನಿನ ಪ್ರಕಾರ ಕುಮ್ಕಿ ಜಮೀನನ್ನು ಯಾರಿಗೂ ಮಂಜೂರು ಮಾಡುವುದು ಸಾಧ್ಯವಿಲ್ಲ. ಜಮೀನು ನಿಮಗೆ ಆಗುತ್ತೆ, ಆಗುತ್ತಾ ನೋಡೋಣ ಎಂದು ಜನರಿಗೆ ತಪ್ಪು ಮಾಹಿತಿ ಅಥವಾ ತಪ್ಪು ನಿರೀಕ್ಷೆಗಳನ್ನು ನೀಡಲು ನಾವು ಸಿದ್ದರಿಲ್ಲ. ಕಹಿಯಾದರೂ ಸತ್ಯವನ್ನು ಹೇಳಲೇಬೇಕು. ಕುಮ್ಕಿ ಜಮೀನನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂಬುದೇ ಸತ್ಯ” ಎಂದು ಮಾಹಿತಿ ನೀಡಿದ್ದಾರೆ. ಕುಮ್ಕಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರ ಬಗ್ಗೆ ವಿಶೇಷ ದೃಷ್ಟಿಯಿಂದ ನೋಡುವ ಅಗತ್ಯವಿದೆ. ಗೋಮಾಳ ಜಾಗದಲ್ಲಿ 94 ಸಿಸಿ ಪ್ರಕಾರ ಮಂಜೂರು ಮಾಡದಿದ್ದರೆ, ಗ್ರ್ಯಾಂಟ್‌ ಮಾಡಬಹುದು. ಆದರೆ, ಕುಮ್ಕಿ ಜಮೀನನ್ನು ಮಂಜೂರು ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ.