ಬೆಂಗಳೂರು: ಹಾಲಿನ ಬೆಲೆ ಹೆಚ್ಚಳ ಮಾಡಿದ ಕೂಡಲೇ ಬಿಜೆಪಿಯವರು ನಮ್ಮ ವಿರುದ್ಧ ಗಲಾಟೆ ಮಾಡುತ್ತಾರೆ. ಹೈನುಗಾರರು ಬದುಕುವುದು ಬೇಡವೇ? ರೈತರೇ, ಹಾಲಿನ ಉತ್ಪಾದನೆ ಎಷ್ಟು ಕಷ್ಟದ ಕೆಲಸ ಎಂಬುದನ್ನು ನೀವೇ ಈ ಬಿಜೆಪಿಯವರಿಗೆ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಖಾತೆಯ ಮೂಲಕ ಹೇಳಿದ್ದಾರೆ.
ಡೇರಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ಕೊಡಬೇಕೆಂದು ಹಾಲು ಒಕ್ಕೂಟದವರು ಕೇಳುತ್ತಿದ್ದಾರೆ. ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ಸಹಕಾರ ಸಚಿವ ರಾಜಣ್ಣರವರು ಹಾಲಿನ ದರ ಹೆಚ್ಚಳ ಮಾಡುವಂತೆ ಹೇಳಿದ್ದರು. ಇದಕ್ಕೆ ವಿಪಕ್ಷಗಳು ಲಬಲಬ ಅಂತ ಬಾಯಿ ಬಡಿದುಕೊಂಡರು. ಇದನ್ನು ನೀವು ಜೋರಾಗಿ ಪ್ರಶ್ನೆ ಮಾಡಬೇಕಿತ್ತು.
ಬೇರೆ ರಾಜ್ಯಗಳಲ್ಲಿ ಜಾಸ್ತಿ ಇದೆ. ನಮ್ಮಲ್ಲಿ ಕಡಿಮೆ ಇದೆ ಅಂತಾ ನಿಮಗೆ ಜೋರಾಗಿ ಹೇಳಕ್ಕಾಗಲ್ವಾ. ನೀವು ಅವರಿಗೆ ಓಟ್ ಬೇರೆ ಕೊಟ್ಟಿದ್ದೀರಾ. ನೀವು ಬಿಜೆಪಿ ವಿರುದ್ಧ ಗಲಾಟೆ ಮಾಡ್ಬೇಕಲ್ವ ಎಂದು ಸಿಎಂ ಜನರಿಗೆ ಪ್ರಶ್ನಿಸಿದರು. ಹಾಲಿಗೆ 5 ರುಪಾಯಿ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ನಾನು. ಕುಮಾರಸ್ವಾಮಿ, ಬೊಮ್ಮಾಯಿ ಯಾರೂ ಮಾಡಿಲ್ಲ. ನಾನು ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡಲು ಕ್ಷೀರ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದೆ. ಇದರಿಂದ ಹೈನುಗಾರರಿಗೆ ಅನುಕೂಲ ಆಯಿತು ಎಂದು ಸಿದ್ದರಾಮಯ್ಯ ಹೇಳಿದರು.

