ಬೆಂಗಳೂರು: ನಮ್ಮ ಮೆಟ್ರೋ ಹಳಿ ನಿರ್ವಹಣೆಯ ಕಾಮಗಾರಿ ಇರುವ ಕಾರಣ ಭಾನುವಾರ ಎರಡು ಪ್ರಮುಖ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ ಭಾನುವಾರ ಮೆಟ್ರೋ ಸೇವೆಯು ಈ ಭಾಗದಲ್ಲಿ ಭಾಗಶಃ ಸ್ಥಗಿತಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಮ್ಮ ಮೆಟ್ರೋ ಭಾನುವಾರ ಮೂರು ಗಂಟೆಗಳ ಕಾಲ ಸಂಪೂರ್ಣವಾಗಿ ಸ್ಥಗಿತವಾಗಿರಲಿದೆ ಎಂದು ಸೂಚನೆ ನೀಡಿದೆ.

ನೇರಳೆ ಮಾರ್ಗದಲ್ಲಿ ಮಾಗಡಿ ರಸ್ತೆಯಿಂದ ಎಂಜಿ ರಸ್ತೆಯವರೆಗಿನ ಸಂಚಾರ ಸೇವೆಯನ್ನ ಬಂದ್ ಮಾಡುವುದಾಗಿ ಮೆಟ್ರೋ ತಿಳಿಸಿದೆ. ಬೆಳಗ್ಗೆ 7 ಗಂಟೆಯಿಂದ 10 ಗಂಟೆವರೆಗೆ ಈ ಮಾರ್ಗದಲ್ಲಿ ಮೆಟ್ರೋ ಸೌಲಭ್ಯ ಇರುವುದಿಲ್ಲ ಎಂದು ಬಿಎಮ್‌ಆರ್‌ಸಿಎಲ್‌ ಹೇಳಿದ್ದು, ತುರ್ತು ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಮಾಡಲಾಗಿದೆ.

ಕಬ್ಬನ್‌ ಪಾರ್ಕ್‌, ಡಾ.ಬಿಆರ್‌ ಅಂಬೇಡ್ಕರ್‌ ನಿಲ್ದಾಣ, ವಿಧಾನಸೌಧ, ಸರ್‌.ಎಂ.ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪಗೌಡ ನಿಲ್ಯಾಣ, ಮೆಜೆಸ್ಟಿಕ್‌ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳನ್ನು ಮುಚ್ಚಲಾಗಿರುತ್ತದೆ. ಈ ಅವಧಿಯಲ್ಲಿ ಮೆಜೆಸ್ಟಿಕ್ ನಿಂದ ಯಾವ ದಿಕ್ಕಿಗೂ ಮೆಟ್ರೋ ಸೇವೆ ಇರುವುದಿಲ್ಲ ಎನ್ನಲಾಗಿದೆ.