ಬೆಂಗಳೂರು: ಶಿರಾಡಿ ಘಾಟಿಯಲ್ಲಿ ರೈಲ್ವೇ ಹಳಿ ಮೇಲೆ ಭಾರಿ ಭೂಕುಸಿತ ಆಗಿರುವ ಪರಿಣಾಮ, ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ರೈಲುಗಳನ್ನು 15 ದಿನಗಳ ಕಾಲ ಬಂದ್ ಮಾಡಲಾಗಿದೆ. ಆಗಸ್ಟ್ 10ರವರೆಗೆ ಇಲ್ಲಿ ರೈಲು ಸಂಚಾರಇರುವುದಿಲ್ಲ.
ಶಿರಾಡಿ ಘಾಟಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ಭೂಕುಸಿತವಾಗಿ ರೈಲ್ವೆ ಹಳಿ ಮುಚ್ಚಿಹೋಗಿದೆ. ಆಗಸ್ಟ್ 10ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ಹೇಳಿದೆ. 14 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. 400 ಮಂದಿಯಿಂದ ರೈಲು ಹಳಿ ತೆರವು ಕಾಮಗಾರಿ ನಡೆಯುತ್ತಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯುಂಟಾಗಿದೆ.ರೈಲು ಸಂಚಾರ ರದ್ದಾದ ಬೆನ್ನಲ್ಲೇ ಬೆಂಗಳೂರು – ಮಂಗಳೂರು ನಡುವಿನ ಫ್ಲೈಟ್ ಟಿಕೇಟ್ ದರ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಇರುತ್ತಿದ್ದ 3000- 3500 ರೂ. ದರ ಇದೀಗ 6604 ರೂಪಾಯಿಗೆ ಏರಿಕೆಯಾಗಿದೆ.
ಶುಕ್ರವಾರ ಸಂಜೆ ವೇಳೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರೈಲು ಹಳಿಗೆ ಅಪಾಯ ಉಂಟಾಗಿತ್ತು. ಆರು ಹಿಟಾಚಿ ಯಂತ್ರಗಳು, ಐದು ಪೋಕ್ಲೈನ್ ಯಂತ್ರಗಳೂ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಭೂಕುಸಿತವಾದ ಜಾಗದಲ್ಲಿ ಮಣ್ಣನ್ನು ತಡೆದಿಡುವ ಕೆಲಸ ನಡೆಯುತ್ತಿದ್ದು, ಕಲ್ಲು ಬಂಡೆ, ಮರಳಿನ ಚೀಲ ಜೋಡಿಸಲಾಗುತ್ತಿದೆ.

