ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದ ನಂತರ ಹಲವು ಮಾರ್ಗಗಳಲ್ಲಿ ಬಸ್‌ಗಳ ಕೊರತೆ ಉಂಟಾಗಿತ್ತು. ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಂದ ಹೆಚ್ಚಿನ ಬಸ್​ಗಳ ನಿಯೋಜನೆಗೆ ಬೇಡಿಕೆ ಬಂದಿತ್ತು.

ಇದರಿಂದ 300ಕ್ಕೂ ಹೆಚ್ಚಿನ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಸೇವೆ ಆರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧಾರ ಮಾಡಿದೆ. ಶಾಲೆ-ಕಾಲೇಜುಗಳು ಹೆಚ್ಚಿರುವ ಮಾರ್ಗಗಳನ್ನು ಕೆಎಸ್ಆರ್​​ಟಿಸಿ ಗುರುತಿಸಿದೆ. ಅಂತಹ ಭಾಗಗಳಿಗೆ ಹೆಚ್ಚುವರಿ ಅಥವಾ ಹೊಸದಾಗಿ ಬಸ್ ಸೇವೆ ಆರಂಭಿಸಲು ಸಿದ್ದತೆ ನಡೆಸಿದೆ.

ಕೆಎಸ್ಆರ್​​ಟಿಸಿಗೆ ಸೇರ್ಪಡೆಯಾಗಿರುವ 814 ಬಸ್‌ಗಳ ಪೈಕಿ 500 ಬಸ್​ಗಳನ್ನು ನಿಯೋಜಿಸಲು ನಿರ್ಧಾರ ಮಾಡಲಾಗಿದೆ.

“ನಮ್ಮ ಸರ್ಕಾರ ಹೊಸ ಬಸ್ ಖರೀದಿಗೆ ಮುಂದಾಗಿದೆ. ಬಿಜೆಪಿ ಸರ್ಕಾರದಲ್ಲಿ ಒಂದು ಹೊಸ ಬಸ್ ಖರೀದಿ ಮಾಡಿರಲಿಲ್ಲ ಇದರಿಂದ ಪ್ರಯಾಣಿಕರಿಗೆ ತುಂಬಾ ಕಷ್ಟ ಆಗಿತ್ತು. ವಿಭಾಗೀಯ ಮಟ್ಟದಲ್ಲಿ ಗುರುತಿಸಲಾಗಿರುವ ಹೊಸ ಮಾರ್ಗಗಳಲ್ಲಿ ಮುಂದಿನ 3 ತಿಂಗಳಲ್ಲಿ ಸೇವೆ ಆರಂಭ ಮಾಡಲಾಗುತ್ತದೆ. ಬಸ್​ ಸೇವೆ ಅವಶ್ಯಕತೆಯಿರುವ ಮಾರ್ಗಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ” ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಸಿಗುತ್ತುಲ್ಲ ಎನ್ನುತ್ತಿದ್ದವರಿಗೆ ಹೊಸ ಬಸ್ ಆರಂಭ ಮಾಡುತ್ತಿರುವುದ ನಿಜಕ್ಕೂ ಸಂತೋಷದ ವಿಷಯ.