ಬೆಂಗಳೂರು: ಬೆಂಗಳೂರಿನಲ್ಲಿ‘ಕೇರಳ ಲಾಟರಿ’ ಹೆಸರಿನಲ್ಲಿ ಆನ್ಲೈನ್ ವಂಚನೆ ಜಾಲ ಸಕ್ರಿಯವಾಗಿದ್ದು, ಇಬ್ಬರು ಅಮಾಯಕ ನಾಗರಿಕರು ಬರೋಬ್ಬರಿ ₹13.71 ಲಕ್ಷ ಕಳೆದುಕೊಂಡು ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾರೆ.
ಡಿಜಿಟಲ್ ಯುಗದಲ್ಲಿ ಹೂಡಿಕೆದಾರರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಹೊಸ ಸ್ಕ್ಯಾಮ್ ಕುರಿತು ಸೈಬರ್ ಕ್ರೈಮ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಂಚನೆಗೊಳಗಾದವರಲ್ಲಿ ವಲಗೇರಹಳ್ಳಿಯ 60 ವರ್ಷದ ಎನ್ಜಿಒ (NGO) ಉದ್ಯೋಗಿ ಒಬ್ಬರು 7.45 ಲಕ್ಷ ರೂ. ಕಳೆದುಕೊಂಡಿದ್ದರೆ, ಮಾರುತಿ ನಗರದ 52 ವರ್ಷದ ರೈತರೊಬ್ಬರು 6.26 ಲಕ್ಷ ರೂ. ಕಳೆದುಕೊಂಡು ಕಂಗಾಲಾಗಿದ್ದಾರೆ.
‘ಕೇರಳ ಸ್ಟೇಟ್ ಲಾಟರಿ’ ಪ್ರತಿನಿಧಿಗಳೆಂದು ಹೇಳಿಕೊಂಡ ಸೈಬರ್ ಕಳ್ಳರು, ಇಬ್ಬರಿಗೂ ವಾಟ್ಸಾಪ್ ಮೂಲಕ ಕರೆ ಮಾಡಿ 8 ಲಕ್ಷ ರೂ. ಲಾಟರಿ ಬಂದಿದೆ ಎಂದು ನಂಬಿಸಿದ್ದರು. ಲಾಟರಿ ಬಂದಿರುವುದನ್ನು ಖಚಿತಪಡಿಸಿಕೊಳ್ಳಲು ವಂಚಕರು ‘thekeralajackpotresult.online’ ಎಂಬ ನಕಲಿ ವೆಬ್ಸೈಟ್ ಲಿಂಕ್ ಕಳುಹಿಸಿದ್ದರು. ಸಂತ್ರಸ್ತರು ಆ ಲಿಂಕ್ ತೆರೆದಾಗ, ಅವರು ಲಾಟರಿ ಗೆದ್ದಿರುವಂತೆ ವೆಬ್ಸೈಟ್ನಲ್ಲಿ ನಕಲಿಯಾಗಿ ಎಡಿಟ್ ಮಾಡಿ ತೋರಿಸಲಾಗಿತ್ತು. ನಂಬಿಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹೆಸರಿನ ನಕಲಿ ಪತ್ರಗಳನ್ನೂ ಕಳುಹಿಸಲಾಗಿತ್ತು.
ಹಣ ಬಿಡುಗಡೆ ಮಾಡಲು ಎನ್ಜಿಒ ಉದ್ಯೋಗಿಗೆ ಜಿಎಸ್ಟಿ , ಟಿಡಿಎಸ್ ಮತ್ತು ಆದಾಯ ತೆರಿಗೆ ಪಾವತಿಸುವಂತೆ ವಂಚಕರು ಸೂಚಿಸಿದ್ದರು. ಇತ್ತ ರೈತನಿಗೆ ಜಿಎಸ್ಟಿ ಜೊತೆಗೆ ಆರ್ಬಿಐನಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಹಣ ಕೇಳಿದ್ದರು.
ಅಷ್ಟೇ ಅಲ್ಲದೆ, ಲಾಟರಿ ಹಣವು ಥಾಯ್ಲೆಂಡ್ನ ‘ಥಾಯ್ ಬಹ್ತ್’ ಕರೆನ್ಸಿಯಲ್ಲಿದೆ, ಅದನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಕರೆನ್ಸಿ ಕನ್ವರ್ಷನ್ ಚಾರ್ಜ್ ಬೇಕು ಎಂದು ನಂಬಿಸಿ ಇಬ್ಬರಿಂದಲೂ ಲಕ್ಷಾಂತರ ರೂಪಾಯಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಬಹುಮಾನದ ಆಸೆಗೆ ಬಿದ್ದ ಬೆಂಗಳೂರಿನ ಇಬ್ಬರು ನಾಗರಿಕರು ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದಾರೆ. ಹಣ ಪಡೆದ ನಂತರ ವಂಚಕರು ತಮ್ಮ ಮೊಬೈಲ್ ನಂಬರ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
ಹಣ ವರ್ಗಾವಣೆಯಾದ ಬಳಿಕ ವಂಚಕರು ಸಂಪರ್ಕಕ್ಕೆ ಸಿಗದಿದ್ದಾಗ ತಮಗೆ ಮೋಸ ಹೋಗಿರುವುದು ಇಬ್ಬರಿಗೂ ಅರಿವಾಗಿದೆ. ವಂಚನೆಗೆ ಒಳಗಾದ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

