ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮರುಜೀವ ಸಿಕ್ಕಿದೆ. ರಾಜ್ಯ ಸರ್ಕಾರ ಬಿಟ್ ಕಾಯಿನ್ ಹಗರಣ ಬಗ್ಗೆ ವಿಶೇಷ ತನಿಖಾ ತಂಡದಿಂದ ಮರು ತನಿಖೆ ಆದೇಶ ನೀಡಿದೆ.
ಪ್ರಕರಣದ ಮೊದಲ ಹಂತವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು. ಬಳಿಕ ಅಲೋಕ್ ಮೋಹನ್ ಪತ್ರದ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸರ್ಕಾರ ಮರು ತನಿಖೆಗೆ ಆಗ್ರಹಿಸಿದೆ. ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದ್ದು, ತನಿಖೆ ಮಂಗಳವಾರದಿಂದಲೇ ಪ್ರಾರಂಭಗೊಳ್ಳಲಿದೆ.
ಎಡಿಜಿಪಿ ಮನೀಶ್ ಕರ್ಬಿಕರ್ ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಹಿಂದಿನ ತನಿಖೆಯಲ್ಲಿ ಸಿಸಿಬಿಯಿಂದ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇದರಿಂದಾಗಿ ಎಸ್ಐಟಿ ತನಿಖೆ ನಡೆಸಲು ಕೋರ್ಟ್ನಿಂದ ಅನುಮತಿ ಪಡೆಯಬೇಕಿದೆ. ಈ ಬಗ್ಗೆ ಸಿದ್ಧತೆ ನಡೆಸಲಾಗಿದೆ.