ಬೆಂಗಳೂರು: ಚಂದ್ರಯಾನ 3 ಉಡ್ಡಯನದ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಇಂದು ಇಸ್ರೋ ಕೈಗೊಳ್ಳಲಿದೆ. ಒಂದು ವೇಳೆ ಇದರಲ್ಲಿ ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ಇವು ಕಾರ್ಯ ನಿರ್ವಹಿಸಲಿವೆ.
ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದ್ದು, ಇಂದು ಅಲ್ಲಿ ಸೂರ್ಯೋದಯವಾಗಲಿದೆ. ಇಂದು ಲ್ಯಾಂಡರ್ ಮತ್ತು ರೋವರ್ಗಳು ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಇದು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆಯಾಗಲಿದೆ. ಅಲ್ಲದೇ ಚಂದ್ರನ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳಲು ಇದು ನೆರವು ನೀಡಲಿದೆ. ಚಂದ್ರನ ಮೇಲೆ 1 ಹಗಲಿನಲ್ಲಿ (ಭೂಮಿಯ 14 ದಿನ) ಕೆಲಸ ಮಾಡಲು ಲ್ಯಾಂಡರ್ ಮತ್ತು ರೋವರ್ಗಳನ್ನು ಕಳುಹಿಸಲಾಗಿತ್ತು. ಆದರೆ ಇವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕಾರಣ 2 ದಿನ ಮೊದಲೇ ಇವುಗಳನ್ನು ಸ್ಲೀಪ್ ಮೋಡ್ಗೆ ಹಾಕಲಾಗಿತ್ತು.
ಚಂದ್ರನಲ್ಲಿ ಸೂರ್ಯನ ಬೆಳಕು ಇಲ್ಲದ ಸಮಯದಲ್ಲಿ ಉಷ್ಣಾಂಶ ಮೈನಸ್ 240 ಡಿಗ್ರಿವರೆಗೂ ತಲುಪುತ್ತದೆ. ಹಾಗಾಗಿ ಈ ಉಷ್ಣಾಂಶದಲ್ಲಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಉಳಿಯುವುದು ಸಾಹಸವೇ ಆಗಿದೆ. ಹಾಗಾಗಿ ಇಸ್ರೋದ ಈ ಪ್ರಯೋಗದ ಮೇಲೆ ಎಲ್ಲಾ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಕಣ್ಣಿಟ್ಟಿವೆ.
ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಮಾಡ್ಯೂಲ್ ಅನ್ನು ಸ್ಲೀಪ್ ಮೋಡ್ ನಿಂದ ಮೇಲೆತ್ತಲು ಪ್ರಯತ್ನಿಸಲಾಗುವುದು. ಗರಿಷ್ಠ ಸೂರ್ಯನ ಬೆಳಕು ಲಭ್ಯವಾದ ನಂತರ ಗುರುವಾರ ಅಥವಾ ಶುಕ್ರವಾರ ಲ್ಯಾಂಡರ್, ರೋವರ್ ಮಾಡ್ಯೂಲ್ ಮತ್ತು ಆನ್-ಬೋರ್ಡ್ ಉಪಕರಣಗಳನ್ನು ಪುನರುಜ್ಜೀವನಗೊಳಿಸಲು ಗ್ರೌಂಡ್ ಸ್ಟೇಷನ್ ಪ್ರಯತ್ನಿಸುತ್ತದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದರು.