ಬೆಂಗಳೂರು: ಹೆಣ್ಣು ಭ್ರೂಣ ಹತ್ಯೆ ತಡೆಗೆ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಂಡರೂ ಅಲ್ಲಲ್ಲಿ ಪ್ರಕರಣಗಳು ಇನ್ನೂ ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಪರಿಷತ್‌ನಲ್ಲಿ ಬಿಜೆಪಿಯ ಸಿಟಿ ರವಿ ಅವರ ಪ್ರಶ್ನೆಗೆ ಆರೋಗ್ಯ ಸಚಿವರು ಉತ್ತರಿಸಿದ್ದಾರೆ. ಸರ್ಕಾರ ಭ್ರೂಣ ಹತ್ಯೆ ತಡೆಗೆ ಬಿಗಿಯಾದ ಕ್ರಮ ಕೈಗೊಂಡಿದೆ, ಆದರೂ ಪ್ರಕರಣ ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಳ್ಳಲು ಆಗುತ್ತಿಲ್ಲ, ಅಲ್ಲಲ್ಲಿ ಪ್ರಕರಣ ನಡೆಯುತ್ತಿದೆ. ಆದರೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದು ಕೇವಲ ಕಾನೂನು ರೂಪಿಸುವುದರಿಂದ ತಡೆಗಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಗೃತಿಯೂ ಬಹಳ ಮುಖ್ಯ. ಯಾಕೆಂದರೆ ಯಾರೂ ಒತ್ತಾಯ ಪೂರ್ವಕವಾಗಿ ಮಾಡಿಕೊಳ್ಳುತ್ತಿಲ್ಲ. ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳುತ್ತಿದ್ದಾರೆ. ಓರಲ್ ಔಷಧದ ಸೇವನೆಯಿಂದಲೂ ನಡೆಯುತ್ತಿದೆ. ಈಗಂತೂ ಅಲ್ಟ್ರಾಸೌಂಡ್ ಪೋರ್ಟೆಬಲ್ ಸ್ಕಾನಿಂಗ್ ಯಂತ್ರದಿಂದ ಅತ್ಯಂತ ಸಣ್ಣ ಸ್ಥಳದಲ್ಲಿಯೂ ಪರೀಕ್ಷೆ ನಡೆಸಬಹುದಾಗಿದೆ ಎಂದು ಸಚಿವರು ಸದನದಲ್ಲಿ ವಿವರಿಸಿದರು.
ಪ್ರತಿ ಜಿಲ್ಲೆಯ ಡೇಟಾ ಪರಿಶೀಲನೆ ನಡೆಸಿ, ಹೆಚ್ಚು ಗಂಡುಮಕ್ಕಳು ಜನಿಸುವ ಆಸ್ಪತ್ರೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಸಾಮಾಜಿಕ ಜಾಗೃತಿ ಮೂಡಿಸುತ್ತಿದ್ದೇವೆ. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಟ್ಟು ಬಹುಮಾನವನ್ನು ನೀಡುತ್ತಿದ್ದೇವೆ. ಪ್ರತಿ ಜಿಲ್ಲೆಗೂ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

