ಬೆಂಗಳೂರು: ರಾಜ್ಯಾದ್ಯಂತ ಎಸ್‌ಐಆರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾರೊಬ್ಬರೂ ಮತದಾನದ ಹಕ್ಕು ಕಳೆದುಕೊಳ್ಳಬೇಡಿ. ಮತದ ಹಕ್ಕು ಕಳೆದುಕೊಂಡರೆ ಸರ್ಕಾರದ ಸವಲತ್ತುಗಳನ್ನೂ ಕಳೆದುಕೊಳ್ಳುತ್ತೀರಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಸೋಮವಾರ ರಾತ್ರಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜೂ.30ರಿಂದ ಜು.29ರವರೆಗೆ ಎಸ್‌ಐಆರ್‌ ಪ್ರಕ್ರಿಯೆ ನಡೆಯಲಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಬಾಗಿಲಿಗೆ ಬರಲಿದ್ದಾರೆ. ಅವರು ಕೊಡುವ ಲಿಖಿತ ರೂಪದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮರೆಯದೇ ಮರಳಿಸುವಂತೆ ವಿನಂತಿಸಿದರು.

ಬಿಎಲ್‌ಒಗಳು ಒಂದು ದಿನಕ್ಕೆ ಕನಿಷ್ಠ 30ರಿಂದ 50 ಮನೆಗಳಿಗೆ ಭೇಟಿ ನೀಡಬಹುದು. ಅವರ ಜತೆಗೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟ್‌ಗಳೂ ಇರುತ್ತಾರೆ. ಅವರ ಸಹಾಯವನ್ನೂ ಮತದಾರರು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ, ಚುನಾವಣಾ ಆಯೋಗದ ವೆಬ್‌ಸೈಟ್‌ ಅಥವಾ ಮೊಬೈಲ್‌ ಆಪ್‌ ಮೂಲಕವೂ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಕೊಡಬಹುದು ಎಂದು ಮಾಹಿತಿ ನೀಡಿದರು.

ಪ್ರತಿ ಮತಗಟ್ಟೆ ಮಟ್ಟದಲ್ಲೂ ಒಂದೊಂದು ಸಹಾಯವಾಣಿ ಸೇರಿ ರಾಜ್ಯಾದ್ಯಂತ ಒಟ್ಟು 49,320 ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಮತದಾರರು ಏನೇ ಗೊಂದಲಗಳಿದ್ದರೂ ಇವುಗಳ ನೆರವು ಪಡೆಯಬಹುದು. ಜು.25ರೊಳಗಾಗಿ ರಾಜ್ಯದ 5.50 ಕೋಟಿ ಮತದಾರರಿಗೆ ಶಾಶ್ವತ ನಿವಾಸ ದೃಢೀಕರಣ ಪ್ರಮಾಣ ಪತ್ರವನ್ನು ತಹಸೀಲ್ದಾರ್ ಅಥವಾ ಉಪತಹಸೀಲ್ದಾರ್‌ ಮೂಲಕ ತಲುಪಿಸುವ ಗುರಿ ಹೊಂದಿದ್ದೇವೆ.

ಎಸ್‌ಐಆರ್‌ ವೇಳೆ ಇದನ್ನೂ ಒಂದು ದಾಖಲಾತಿಯಾಗಿ ಸಲ್ಲಿಸಲು ಅವಕಾಶ ಇರುತ್ತದೆ. ಅಲ್ಲದೆ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್‌, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ನಿವೇಶನ ಅಥವಾ ಮನೆಯ ದಾಖಲಾತಿ, ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ ಸೇರಿದಂತೆ 11ರಿಂದ 12 ದಾಖಲೆಗಳನ್ನು ಸಲ್ಲಿಸಲೂ ಅವಕಾಶವಿದೆ ಎಂದು ಸಿಎಂ ವಿವರಿಸಿದರು.