ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಹಾಗೂ ಪತ್ನಿ ಪಾರ್ವತಿ ಪತ್ರದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿಯನ್ನು ಪತ್ನಿಯ ಸಹೋದರ ಆಕೆಗೆ ಉಡುಗೊರೆಯಾಗಿ ನೀಡಿದ್ದಾಗಿದೆ. ಇದನ್ನು ಮುಡಾ ಒತ್ತುವರಿ ಮಾಡಿಕೊಂಡಿದ್ದು, ಇದಕ್ಕಾಗಿ ಪರ್ಯಾಯ ನಿವೇಶನ ಕೇಳಿದ್ದೇವೆಯೇ ಹೊರತು ಇಡೀ ವಿಜಯನಗರವನ್ನು ಕೇಳಿಲ್ಲ. ಆದರೆ ಇದು ದೊಡ್ಡ ರಾಜಕೀಯವಾಗಿ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನವರು ಏನು ಬೇಕಾದರೂ ಮಾಡಲಿ ಎಂದರು.
ಇಲ್ಲಿ ಮನಿ ಲಾಂಡರಿಂಗ್ ವಿಚಾರ ಬರಲ್ಲ. ಪ್ರಕರಣದಲ್ಲಿ ನನ್ನ ಪಾತ್ರವೇನು?. ಇದು ರಾಜಕೀಯಕ್ಕೆ ಕಾರಣವಾಯಿತು ಎಂದು ಭಾವಿಸಿ ಯಾವುದೇ ವಿವಾದ ಬೇಡ ಎಂದು ನನ್ನ ಪತ್ನಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಬಿಎಸ್ ಯಡಿಯೂರಪ್ಪ ಅವರ ಪ್ರಕರಣ ಮತ್ತು ನನ್ನ ಪ್ರಕರಣ ಬೇರೆ ಬೇರೆಯದ್ದಾಗಿದೆ. ಅವರು ಜಮೀನು ಡಿನೋಟಿಫಿಕೇಶನ್ ಮಾಡಿದ್ದು, ಅದರಲ್ಲಿ ನಾನು ಭಾಗಿಯಾಗಿಲ್ಲ. ಒಟ್ಟಿನಲ್ಲಿ ನಾನು ಸ್ವಯಂ ಸಾಕ್ಷಿಯಾಗಿ ರಾಜೀನಾಮೆ ನೀಡುವುದಿಲ್ಲ ಇಡಿ ಅಥವಾ ಯಾವುದೇ ತನಿಖೆ ನಡೆದರೂ ನಾನು ಅದನ್ನು ಕಾನೂನುಬದ್ಧವಾಗಿ ಹೋರಾಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

