ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಆರೋಗ್ಯ ಸಮಸ್ಯೆಯನ್ನು ಕಾರಣವನ್ನಾಗಿ ನೀಡಿ ಮನೆ ಊಟಕ್ಕೆ ಹಾಗೂ ಇತರೆ ಕೆಲವು ವಸ್ತುಗಳಿಗೆ ಬೇಡಿಕೆ ಇರಿಸಿದ್ದರು.

ಮನೆ ಊಟ ಹಾಗೂ ಇತರೆ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು (ಆಗಸ್ಟ್ 20) ಹೈಕೋರ್ಟ್​ನ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸೆಪ್ಟೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಆರೋಗ್ಯ ಸಮಸ್ಯೆ, ನಿದ್ರಾಹೀನತೆ ಸಮಸ್ಯೆ ಕಾಡುತ್ತಿರುವುದಾಗಿ ಕಾರಣ ನೀಡಿ, ಮನೆ ಊಟ, ಹಾಸಿಗೆ, ಚಮಚ, ತಟ್ಟೆಗಳಿಗೆ ನಟ ದರ್ಶನ್ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ಜೈಲು ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದ್ದರು, ಜೈಲು ಅಧಿಕಾರಿಗಳು ತಮ್ಮ ನಿರ್ಣಯವನ್ನು ನೀಡುವಂತೆ ಹೇಳಿದ್ದರು. ಅಂತೆಯೇ ನಿರ್ಧಾರವನ್ನು ಹೈಕೋರ್ಟ್​ಗೆ ನೀಡಿದ್ದ ಜೈಲು ಅಧಿಕಾರಿಗಳು ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.