ಬೆಂಗಳೂರು : ಕರ್ನಾಟಕದಲ್ಲಿ ಮುಂದಿನ 4 ದಿನ ಮುಂಗಾರು ಮಳೆ ಮತ್ತಷ್ಟು ಹೆಚ್ಚಳವಾಗಲಿದ್ದು, ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 13ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ರಾಜ್ಯದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಒಳನಾಡಿನ ಹಾಸನ, ಮೈಸೂರು, ಮಂಡ್ಯ, ರಾಮನಗರ, ಕೊಡಗು,ಚಾಮರಾಜನಗರ,ಬೆಂಗಳೂರು, ಕೋಲಾರ, ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಒಂದೆರಡು ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 21°C ಇರಲಿದೆ.
ಹಾಗೆಯೇ ಕರ್ನಾಟಕದಲ್ಲಿ ಅಗಸ್ಟ್ 18ರವರೆಗೂ ಮಳೆ ಮುಂದುವರಿಯಲಿದ್ದು, ಅನಂತರ ವರುಣನ ಅಬ್ಬರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವಿಶ್ಲೇಷಕರು ಅಭಿಪ್ರಾಯ ನೀಡಿದ್ದಾರೆ.

