ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್‌ನಲ್ಲಿ ರೈತನಿಗೆ ಅವಮಾನ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪಂಚೆ ಹಾಕೊಂಡು ಬಂದಿದ್ದಕ್ಕೆ ರೈತನನ್ನು ಒಳಗೆ ಬಿಡದೆ ಮಾಲ್ ಸಿಬ್ಬಂದಿ ತಡೆದಿದ್ದಾರೆ ಎನ್ನಲಾಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ನಲ್ಲಿ ಇಂದು ಸಂಜೆ ಇಂತಹದೊಂದು ಘಟನೆ ನಡೆದಿದೆ. ಹಾವೇರಿ ಮೂಲದ ನಾಗರಾಜ್ ತಮ್ಮ ತಂದೆ, ತಾಯಿಯನ್ನು ಜಿಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದಾರೆ.
ತಂದೆಯನ್ನು ಸಿನಿಮಾ ತೋರಿಸಲು ಮಗ ಕರೆದುಕೊಂಡು ಹೋಗುವಾಗ ಮಾಲ್ ಪ್ರವೇಶ ದ್ವಾರದಲ್ಲಿ ತಡೆದಿದ್ದಾರೆ. ರೈತರು ಪಂಚೆ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಅವರನ್ನು ಸೆಕ್ಯೂರಿಟಿ ಸಿಬ್ಬಂದಿ ಮಾಲ್ ಒಳಗೆ ಪ್ರವೇಶ ಮಾಡಲು ಬಿಡಲಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಪಂಚೆ ಹಾಕಿದ್ದ ರೈತನನ್ನು ಮಾಲ್ ಮುಂದೆಯೇ ಕೂರಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಡಿಯೋ ಮಾಡಿರೋ ನಾಗರಾಜ್ ಅವರು ಮಾಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

