ಬೆಂಗಳೂರು: ಕರ್ನಾಟಕದ ಎನ್.ಆರ್.ನಾರಾಯಣ ಮೂರ್ತಿ ಸೇರಿ ಹಲವರು ಹುಟ್ಟು ಹಾಕಿರುವ ಐಟಿ ದೈತ್ಯ ಇನ್ಫೋಸಿಸ್ ಕಂಪನಿ ವಿರುದ್ಧ ತೆರಿಗೆ ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಇನ್ಫೋಸಿಸ್ ಕಂಪನಿಗೆ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯವು 32 ಸಾವಿರ ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ನೋಟಿಸ್ ಜಾರಿ ಮಾಡಿದೆ.
ಇನ್ಫೋಸಿಸ್ ಕಂಪನಿಯು ಬೇರೆ ದೇಶಗಳಲ್ಲಿ ಹೊಂದಿರುವ ಬ್ರ್ಯಾಂಚ್ ಆಫೀಸ್‌ಗಳಿಂದ 2017-18ರಿಂದ 2021-22ರಲ್ಲಿ ಸರಬರಾಜು ಮಾಡಲಾಗಿರುವ ಸ್ವೀಕೃತಿಗಳ ಬದಲಾಗಿ ಬ್ರ್ಯಾಂಚ್ ಆಫೀಸ್‌ಗಳ ವೆಚ್ಚ ಎಂಬುದಾಗಿ ಉಲ್ಲೇಖಿಸಲಾಗಿದೆ.
ರಿವರ್ಸ್ ಚಾರ್ಜ್ ಮೆಕ್ಯಾನಿಸಂ ನಿಯಮಗಳ ಪ್ರಕಾರ ಭಾರತದಿಂದ ಹೊರಗಿರುವ ಬ್ರ್ಯಾಂಚ್‌ಗಳಿಂದ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಕಂಪನಿಯು 32,403 ಕೋಟಿ ರೂ. ಐಜಿಎಸ್‌ಟಿ ಪಾವತಿಸಬೇಕು ಎಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ನಿಯಮಗಳ ಪ್ರಕಾರ, ಸರಕು ಅಥವಾ ಸೇವೆಗಳನ್ನು ಸ್ವೀಕರಿಸುವವರು ಪೂರೈಕೆದಾರರ ಬದಲಿಗೆ ತೆರಿಗೆ ಪಾವತಿಸಬೇಕು ಎಂಬುದೇ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಆಗಿದೆ.
ರಫ್ತು ಮಾಡಲಾದ ಉತ್ಪನ್ನಗಳ ಇನ್‌ವಾಯ್ಸ್‌ನಲ್ಲಿ ಇನ್ಫೋಸಿಸ್ ಘಟಕಗಳ ಖರ್ಚು ವೆಚ್ಚಗಳನ್ನೂ ನಮೂದಸಿರುವುದು ಜಿಎಸ್‌ಟಿ ಗುಪ್ತಚರ ವಿಭಾಗದ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಇನ್ಫೋಸಿಸ್‌ಗೆ 32 ಸಾವಿರ ಕೋಟಿ ರೂ. ಜಿಎಸ್‌ಟಿ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

