ಬೆಂಗಳೂರು: ಸ್ಮಾರ್ಟ್‌ಫೋನ್‌ನಲ್ಲಿ ದಿನಸಿ, ತರಕಾರಿ ಬುಕ್ ಮಾಡಿದರೆ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ಮನೆಬಾಗಿಲಿಗೆ ತಂದುಕೊಡುವ ‘ಕ್ವಿಕ್ ಕಾಮರ್ಸ್’ ಆ್ಯಪ್‌ಗಳು, ಇದೀಗ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿವೆ.
ದಿನಸಿಯನ್ನೇನೋ ಆ್ಯಪ್‌ನಲ್ಲಿ ಬುಕ್ ಮಾಡ್ತೀವಿ, ಆದ್ರೆ ಗ್ಯಾಸ್ ಖಾಲಿಯಾದರೆ ಏನು ಮಾಡೋದು? ಹೀಗೊಂದು ಚಿಂತೆ ನಿಮಗಿದ್ರೆ, ಇನ್ಮುಂದೆ ಆ ಚಿಂತೆಯನ್ನೂ ಬಿಡಿ. ಏಕೆಂದರೆ ಭಾರತದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕ ‘ಗ್ಯಾಸ್ ಸಿಲಿಂಡರ್’ ಡೆಲಿವರಿ ಮಾಡುವ ಕ್ರಾಂತಿಕಾರಿ ಸೇವೆಗೆ ಇನ್‌ಸ್ಟಾಮಾರ್ಟ್ ಮುನ್ನುಡಿ ಬರೆದಿದೆ.

ಕೇಂದ್ರ ಸರ್ಕಾರದ ಮಹಾರತ್ನ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಎಚ್‌ಪಿಸಿಎಲ್) ಜೊತೆ ಒಪ್ಪಂದ ಮಾಡಿಕೊಂಡಿರುವ ಇನ್‌ಸ್ಟಾಮಾರ್ಟ್, ಬೇಡಿಕೆಯ ಮೇರೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಸೇವೆಯನ್ನು ಆರಂಭಿಸಿದೆ.
ಏನಿದು ‘ಎಚ್‌ಪಿ ನವ್ಯ’ ಸಿಲಿಂಡರ್?
ಈ ಒಪ್ಪಂದದ ಭಾಗವಾಗಿ ಎಚ್‌ಪಿಸಿಎಲ್ ತನ್ನ ಹೊಸ ಪೀಳಿಗೆಯ ಸಿಲಿಂಡರ್ ಆದ ‘ಎಚ್‌ಪಿ ನವ್ಯ’ವನ್ನು (HP Navya) ಇನ್‌ಸ್ಟಾಮಾರ್ಟ್ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು 10 ಕೆಜಿ ಸಾಮರ್ಥ್ಯದ ಕಾಂಪೋಸಿಟ್ ಸಿಲಿಂಡರ್ ಆಗಿದ್ದು, ಸಾಮಾನ್ಯ ಸಿಲಿಂಡರ್‌ಗಿಂತ ಅತಿ ಹಗುರವಾಗಿದೆ. ತುಕ್ಕು ಹಿಡಿಯದಂತೆ ವಿನ್ಯಾಸಗೊಳಿಸಲಾಗಿರುವ ಈ ಸಿಲಿಂಡರ್, ಅರೆ-ಪಾರದರ್ಶಕ ಬಾಡಿಯನ್ನು ಹೊಂದಿದೆ. ಇದರಿಂದ ಒಳಗಡೆ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನೂ ಗ್ರಾಹಕರು ಹೊರಗಿನಿಂದಲೇ ಸುಲಭವಾಗಿ ನೋಡಬಹುದು. ಇದರ ಜೊತೆಗೆ 5 ಕೆಜಿ ಸಾಮರ್ಥ್ಯದ ಸಾಮಾನ್ಯ ಮೆಟಲ್ ಸಿಲಿಂಡರ್ ಕೂಡ ಆ್ಯಪ್‌ನಲ್ಲಿ ಲಭ್ಯವಿರಲಿದೆ.
ಬ್ಯಾಚುಲರ್ಸ್, ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಸೇವೆ!
ಬೆಂಗಳೂರಿನಂತಹ ನಗರಗಳಲ್ಲಿ ಪಿಜಿ, ರೂಮ್ ಮಾಡಿಕೊಂಡು ಇರುವ ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್‌ಗಳಿಗೆ ಗ್ಯಾಸ್ ಕನೆಕ್ಷನ್ ಪಡೆಯುವುದು ದೊಡ್ಡ ತಲೆನೋವಿನ ಕೆಲಸ. ಆದರೆ ಇನ್‌ಸ್ಟಾಮಾರ್ಟ್‌ನಲ್ಲಿ ಸಿಲಿಂಡರ್ ಖರೀದಿಸಲು ಯಾವುದೇ ಕನೆಕ್ಷನ್, ದಾಖಲೆಗಳ ಗೋಜಲಿಲ್ಲ. ಎಮರ್ಜೆನ್ಸಿಗೆ ಎರಡನೇ ಸಿಲಿಂಡರ್ ಬೇಕು ಎನ್ನುವವರಿಗೂ, ಫ್ಲ್ಯಾಟ್‌ಗಳಲ್ಲಿ ವಾಸಿಸುವವರಿಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ. ಮೊದಲ ಹಂತದಲ್ಲಿ ಈ ಸೇವೆ ‘ಬೆಂಗಳೂರಿನ’ ಜನತೆಗೆ ಮಾತ್ರ ಲಭ್ಯವಿರಲಿದೆ.
ಆರ್ಡರ್ ಮಾಡುವುದು ಹೇಗೆ? ಡೆಲಿವರಿ ಯಾರು ಮಾಡ್ತಾರೆ?
ಗ್ರಾಹಕರು ಇನ್‌ಸ್ಟಾಮಾರ್ಟ್ ಆ್ಯಪ್ ತೆರೆದು ತಮಗೆ ಬೇಕಾದ 10 ಕೆಜಿ ಅಥವಾ 5 ಕೆಜಿ ಸಿಲಿಂಡರ್ ಅನ್ನು ಕಾರ್ಟ್‌ಗೆ ಸೇರಿಸಿ ಆರ್ಡರ್ ಮಾಡಬಹುದು. ಮೊದಲ ಬಾರಿಗೆ ಆರ್ಡರ್ ಮಾಡುತ್ತಿದ್ದರೆ, ಹೊಸ ಸಿಲಿಂಡರ್‌ನ ಪೂರ್ಣ ಹಣವನ್ನು ಪಾವತಿಸಬೇಕು. ಈ ವೇಳೆ ಗುರುತಿನ ಚೀಟಿ ಪರಿಶೀಲನೆ ಇರುತ್ತದೆ.
ಒಮ್ಮೆ ಗ್ಯಾಸ್ ಖಾಲಿಯಾದ ನಂತರ, ಮತ್ತೆ ಆ್ಯಪ್‌ನಲ್ಲಿ ರಿಫಿಲ್ ಆರ್ಡರ್ ಮಾಡಬಹುದು. ಆಗ ಸಾಮಾನ್ಯ ಗ್ಯಾಸ್‌ನಂತೆಯೇ ಹೊಸ ಸಿಲಿಂಡರ್ ತಂದು ಕೊಡುವಾಗ, ಹಳೆಯ ಖಾಲಿ ಸಿಲಿಂಡರ್ ಅನ್ನು ವಾಪಸ್ ನೀಡಬೇಕಾಗುತ್ತದೆ.
ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಗ್ಯಾಸ್ ಸಿಲಿಂಡರ್‌ಗಳನ್ನು ಸಾಮಾನ್ಯ ದಿನಸಿ ತರುವ ಡೆಲಿವರಿ ಬಾಯ್ಸ್ ತರುವುದಿಲ್ಲ. ಬದಲಾಗಿ, ಆಯಾ ಏರಿಯಾದಲ್ಲಿರುವ ಎಚ್‌ಪಿಸಿಲ್‌ನ ಅಧಿಕೃತ ವಿತರಕರೇ, ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಪಾಲಿಸಿ, ತರಬೇತಿ ಪಡೆದ ಸಿಬ್ಬಂದಿಯ ಮೂಲಕವೇ ಸಿಲಿಂಡರ್‌ನ್ನು ನಿಮ್ಮ ಮನೆಗೆ ಸುರಕ್ಷಿತವಾಗಿ ತಲುಪಿಸಲಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, “ಇನ್‌ಸ್ಟಾಮಾರ್ಟ್ ಕೇವಲ ದಿನಸಿಗೆ ಸೀಮಿತವಾಗಿಲ್ಲ; ಜನರ ದೈನಂದಿನ ಬದುಕಿನ ಭಾಗವೇ ಆಗಿ ಹೋಗಿದೆ. ಎಚ್‌ಪಿಸಿಎಲ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ ನಾವು ಅಗತ್ಯ ಗೃಹೋಪಯೋಗಿ ಸೇವೆಯನ್ನು ಒದಗಿಸುತ್ತಿದ್ದು, ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲಿದ್ದೇವೆ,” ಎಂದರು.
“ಗ್ರಾಹಕರ ಅಗತ್ಯಗಳು ಬದಲಾಗುತ್ತಿವೆ. ನವ ಭಾರತದ ಜನತೆಗೆ ಎಲ್‌ಪಿಜಿಯನ್ನು ಸುಲಭವಾಗಿ ಮತ್ತು ವೇಗವಾಗಿ ತಲುಪಿಸಲು ನಾವು ಬದ್ಧರಾಗಿದ್ದೇವೆ,” ಎಂದು ಎಚ್‌ಪಿಸಿಎಲ್ ಮಾರ್ಕೆಟಿಂಗ್ ಡೈರೆಕ್ಟರ್ ಅಮಿತ್ ಗರ್ಗ್ ಹೇಳಿದ್ದಾರೆ. “ಇನ್‌ಸ್ಟಾಮಾರ್ಟ್ ಮೂಲಕ ನಮ್ಮ ಹೊಸ ‘ಎಚ್‌ಪಿ ನವ್ಯ’ ಸಿಲಿಂಡರ್‌ಗಳು ತ್ವರಿತವಾಗಿ ಗ್ರಾಹಕರನ್ನು ತಲುಪಲಿವೆ,” ಎಂದು ಅವರು ಭರವಸೆ ನೀಡಿದ್ದಾರೆ.

