ಬೆಂಗಳೂರು : ಕರ್ನಾಟಕದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಇನ್ನು ಮುಂದೆ ಹಸುಗಳು, ಕುರಿ ಮತ್ತು ಮೇಕೆಗಳನ್ನು ಮೇಯಿಸುವುದನ್ನು ನಿಷೇಧಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಪಶುಗಳನ್ನು ಮೇಯಲು ಬಿಡುವುದರಿಂದ ಆಗಷ್ಟೇ ಚಿಗುರುತ್ತಿರುವ ಸಸಿಗಳು ನಾಶವಾಗುತ್ತದೆ. ಇದರಿಂದಾಗಿ ಅರಣ್ಯಾಭಿವೃದ್ದಿಗೆ ಹಾನಿಯುಂಟಾಗುತ್ತದೆ. ಈ ಕಾರಣದಿಂದ ಅರಣ್ಯ ಪ್ರದೇಶಗಳಲ್ಲಿ ಪಶು ಸಂಗೋಪನೆ ಚಟುವಟಿಕೆಗಳನ್ನು ನಿಷೇಧಿಸಿರುವುದಾಗಿ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಜು. 22 ರಂದು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿಗಳಾಗಿರುವ ಈಶ್ವರ. ಬಿ. ಖಂಡ್ರೆ ಈ ಬಗ್ಗೆ ಅಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ. ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ಧಾಮಗಳ ಅಂಚಿನ ಕೆಲವು ಗ್ರಾಮಸ್ಥರು ಬಹು ದೊಡ್ಡ ಸಂಖ್ಯೆಯಲ್ಲಿ ಕುರಿ, ಮೇಕೆ ಮತ್ತು ದನಕರುಗಳನ್ನು ಅರಣ್ಯ ಪ್ರದೇಶದೊಳಗೆ ಮೇಯಲು ಬಿಡುತ್ತಿದ್ದು, ಈ ಸಾಕು ಪ್ರಾಣಿಗಳು ಆಗಷ್ಟೇ ಮೊಳಕೆಯೊಡೆದ ಚಿಕ್ಕಪುಟ್ಟ ಸಸಿಗಳನ್ನೂ ತಿನ್ನುವ ಕಾರಣ ಅರಣ್ಯದಲ್ಲಿ ಹೊಸ ಸಸಿಗಳು ಬೆಳೆಯದೆ ಅರಣ್ಯ ಸಂವರ್ಧನೆಗೆ ಅಡ್ಡಿಯಾಗುತ್ತಿದೆ.
ಕಾಡಿನಲ್ಲಿರುವ ಸಸ್ಯಾಹಾರಿ ಪ್ರಾಣಿಗಳಿಗೂ ಮೇವಿನ ಕೊರತೆ ಉಂಟಾಗುತ್ತಿದೆ. ಮಿಗಿಲಾಗಿ ಊರಿನಿಂದ ಕಾಡಿಗೆ ಮೇಯಲು ಹೋಗುವ ಪ್ರಾಣಿಗಳಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಅರಣ್ಯ ಸಂವರ್ಧನೆಯಾಗದಿದ್ದರೆ ಅದು ಆ ಅರಣ್ಯದಲ್ಲಿ ಹರಿಯುವ ನದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗುತ್ತದೆ. ಕಾಡಿನೊಳಗೆ ಹೋಗುವ ದನಗಾಹಿಗಳು ವನ್ಯಜೀವಿಗಳ ದಾಳಿಯಿಂದ ಮೃತಪಟ್ಟರೆ ಪರಿಹಾರ ನೀಡಲೂ ನಿಯಮದಲ್ಲಿ ಅವಕಾಶವಿರುವುದಿಲ್ಲ.

