ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆದಿದೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಶ್ರೀಲಂಕಾದ ಕೊಲೊಂಬೊದಿಂದ 6E 1168 ವಿಮಾನದಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದಿದ್ದ ಪ್ರಯಾಣಿಕರ ತಪಾಸಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಾರೆ.

ತಪಾಸಣೆ ವೇಳೆ ಮೂವರು ಆರೋಪಿಗಳು ಪೆಸ್ಟ್ ರೂಪದಲ್ಲಿ ಗುದದ್ವಾರದಲ್ಲಿ ಚಿನ್ನ ಅಡಗಿಸಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಪೆಸ್ಟ್ ರೂಪದಲ್ಲಿ ಇಟ್ಟುಕೊಂಡು ಬಂದಿದ್ದ 1 ಕೋಟಿ 19 ಲಕ್ಷದ 38 ಸಾವಿರ ಮೌಲ್ಯದ 1,670 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕಸ್ಟಮ್ಸ್ ಅಧಿಕಾರಿಗಳಿಂದ ತೀವ್ರ ವಿಚಾರಣೆ ನಡೆಯುತ್ತಿದೆ.