News Karnataka Kannada
Monday, April 29 2024
ಬೆಂಗಳೂರು

ನಮಗೂ ಭಾಗ್ಯ ಕೊಡಿ ಎಂದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

Give us luck, said Kempanna, president of the contractors' association
Photo Credit : News Kannada

ಬೆಂಗಳೂರು: ರಾಜ್ಯದಲ್ಲಿ ಭಾರಿ ಸುದ್ದಿಯಾಗಿದ್ದ ಗುತ್ತಿಗೆದಾರರ ಸಂಘದ ಕಮಿಷನ್‌ ಆರೋಪದ ಕುರಿತು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಜ್ಯ ಸರ್ಕಾರದ ವಿರುದ್ಧ ಯಾರೂ ಕಮಿಷನ್ ಆರೋಪವನ್ನು ಮಾಡಿಲ್ಲ ಎಂದು ಹೇಳಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಆಗಸ್ಟ್ 31ರೊಳಗೆ ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಶುಕ್ರವಾರ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಆಗಸ್ಟ್ 31ರೊಳಗೆ ಗುತ್ತಿಗೆದಾರರಿಗೆ ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕೋಟಿ ಕೋಟಿ ರೂಪಾಯಿಗಳನ್ನು ಬ್ಯಾಂಕ್, ಖಾಸಗಿ ಮತ್ತಿತರ ಮೂಲಗಳಿಂದ ಸಾಲ ತಂದು ಕಾಮಗಾರಿಗಳನ್ನು ಮುಗಿಸಲಾಗಿರುತ್ತದೆ. ಹಲವಾರು ಪ್ರಕರಣಗಳಲ್ಲಿ ಮನೆ, ಚಿನ್ನ ನಿವೇಶನಗಳ ಪತ್ರಗಳನ್ನು ಅಡವಿಟ್ಟು ಸಾಲ ಮಾಡಲಾಗಿರುತ್ತದೆ. ಕೆಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲೆಂದೇ ಹಣವನ್ನು ಎತ್ತಿ ಇಡಲಾಗಿದೆ. ಉದಾಹರಣೆಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲೆಂದೇ ಸರಕಾರ ಬಿಬಿಎಂಪಿಗೆ ರೂ. 675 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೂ ಬಿಬಿಎಂಪಿ ಆಯುಕ್ತರು ಮೇಲಿನಿಂದ ಆದೇಶ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಳು ತಿಂಗಳಿಂದ ಬಾಕಿ ಹಣ ಬರಬೇಕು. ಈಗಾಗಲೇ ಕೆಲವಷ್ಟು ಹಣ ಬಿಡುಗಡೆ ಆಗಿದೆ. ನೂರು ಕೋಟಿ ರೂ. ಸಾಲಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ.  ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೂ ಮನವಿ ಸಲ್ಲಿಸಿ ಕೇಳಿಕೊಂಡಿದ್ದೇವೆ. ಎಲ್ಲರೂ ಮುಂದಿನ ವಾರ, ಕೆಲವೇ ದಿನ ಎಂದು ಸಬೂಬು ಹೇಳುತ್ತಾ ಬಂದರು. ಸರ್ಕಾರ 28-06-2023 ಮತ್ತು 30-07-2023 ರಂದು ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವುದು ಎಂದು ಸುತ್ತೋಲೆ ಹೊರಡಿಸಿದೆಯಾದರೂ ಕಾರ್ಯರೂಪಕ್ಕೆ ಬಂದಿಲ್ಲ. ಸಂಬಂಧಪಟ್ಟ ಸಚಿವರಿಂದ ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಸಂಘ ಕೈಚೆಲ್ಲಿ ಕುಳಿತುಕೊಳ್ಳದೇ ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ನಿರಂತರವಾಗಿ ನೆನಪು ಮಾಡುತ್ತಲೇ ಬಂದಿದ್ದೇವೆ.  ಆಯಾ ಜಿಲ್ಲೆಗಳ ಮಟ್ಟದಲ್ಲಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿರುತ್ತಾರೆ. ಆದರೂ ಸರ್ಕಾರ ಗುತ್ತಿಗೆದಾರರ ಸಂಕಟವನ್ನು ಆಲಿಸಲು ಸಿದ್ಧವಿಲ್ಲ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು.

ಕಾಮಗಾರಿಗಳನ್ನು ಪ್ರಮುಖವಾಗಿ ಕೈಗೊಳ್ಳುವ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಲಾಖೆಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಕೆಲಸಗಳಿಗೂ ಹಣ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರು ಏನು ಮಾಡಬೇಕು?… ಹಣ ಬಿಡುಗಡೆಯಾಗುವುದು ಎರಡು ಮೂರು ತಿಂಗಳು ತಡವಾದರೂ ಗುತ್ತಿಗೆದಾರರಿಗೆ ಸಿಗುವ ಲಾಭ ಬಡ್ಡಿಗೆ ಹೋಗುತ್ತದೆ. ಇಂತಹ ಕಷ್ಟಗಳನ್ನು ಯಾರಲ್ಲಿ ಹೇಳಿಕೊಳ್ಳಬೇಕು?..ಗುತ್ತಿಗೆದಾರರು ಆಶಾಭಾವನೆಯಿಂದ ಚಾತಕ ಪಕ್ಷಿಗಳಂತೆ ಸರ್ಕಾರದ ಬಾಕಿ ಹಣ ಬಿಡುಗಡೆ ಮಾಡುವುದನ್ನೇ ಕಾಯುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಯಾವ ಸಚಿವರೂ ಕಮಿಷನ್ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ‌. ಯಾರೋ ಮೂರನೇ ವ್ಯಕ್ತಿ ಹೇಳುತ್ತಿರುವುದಕ್ಕೂ ನಮಗೂ ಸಂಬಂಧವಿಲ್ಲ ಎಂದು ತಿಳಿಸಿದರು.

ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡುವಂತೆ ಮೊದಲಿಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಿದ್ದೆವು. ಬಳಿಕ ಪ್ರಧಾನಿ ಮೋದಿಯವರಿಗೆ ಪತ್ರ ನೀಡಿದೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಹೀಗೆ ಹಲವರಿಗೂ ಪತ್ರ ನೀಡಿದ್ದೆವು. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರೂ ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಕರೆದಿದ್ದಕ್ಕೆ ಹೋಗಿದ್ದೆ. ಈಗ ವಿಪಕ್ಷ ನಾಯಕರು ಕರೆದರೆ ಹೋಗಲ್ಲ ಎನ್ನುವುದಕ್ಕೆ ಆಗುವುದಿಲ್ಲ. ಬಿಜೆಪಿ ವಿಪಕ್ಷ ನಾಯಕರು ಕರೆದರೆ ಹೋಗುತ್ತೇನೆ. ನಾವು ಗುತ್ತಿಗೆದಾರರು, ಗುತ್ತಿಗೆದಾರರ ಪರವಾಗಿ ಮಾತ್ರವೇ ನಾನು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬೊಮ್ಮಾಯಿಗೆ ಎಷ್ಟು ಬಾರಿ ಭೇಟಿಯಾಗಲು ಪ್ರಯತ್ನಿಸಿದ್ದೆವು  ಆದರೆ, ಅವರು ನಮಗೆ ಭೇಟಿಗೆ ಅವಕಾಶವೇ ಕೊಡಲಿಲ್ಲ. ಅವರಿಗೆ ಮನವಿ ಪತ್ರ ಕೊಟ್ಟೆವು, ಜೇಬಲ್ಲಿ ಇಟ್ಟುಕೊಂಡರು. ಆದರೆ ಕರೆದು ಮಾತಾಡೋ ಕೆಲಸ ಮಾಡಲಿಲ್ಲ. ಬದಲಿಗೆ ಅವರಿಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದರು. ಆದರೂ ಅವರ ಮೇಲೆ ನಮಗೆ ಈಗಲೂ ಗೌರವ ಇದೆ ಎಂದರು.

ನಮ್ಮ ಪರಿಸ್ಥಿತಿ ಬಾಣಲೆಯಿಂದ ತೆಗೆದು ಬೆಂಕಿಗೆ ಬಿದ್ದಂತಾಗಿದೆ. 25 ಸಾವಿರ ಕೋಟಿ ರೂ. ಬಾಕಿ ಇದೆ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಾವು ಕೆಲಸ ಮಾಡಿರುವುದಕ್ಕೆ ನಮಗೂ ಭಾಗ್ಯ ಕೊಡಿ, ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ನಾವು ಸರ್ಕಾರಕ್ಕೆ ಗಡುವು ನೀಡುತ್ತಿಲ್ಲ. ನಮಗೆ ಈಗಲೇ ಹಣ ಬಿಡುಗಡೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು