ಬೆಂಗಳೂರು: ಜರ್ಮನಿ ಮೂಲದ ಫ್ಲಿಕ್ಸ್‌ಬಸ್ ದಕ್ಷಿಣ ಭಾರತಕ್ಕೆ ಪದಾರ್ಪಣೆ ಮಾಡಿದೆ. ಫ್ಲಿಕ್ಸ್‌ಬಸ್ ಸೇವೆಗೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಂಗಳವಾರ ಹಸಿರು ನಿಶಾನೆ ತೋರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಭಾರತವೂ ಸೇರಿದಂತೆ 43 ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಫ್ಲಿಕ್ಸ್‌ಬಸ್ ಸೇವೆಯು ದಕ್ಷಿಣ ಭಾರತದಲ್ಲಿ ಜನರ ಪ್ರಯಾಣದ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಖಾಸಗಿ ಬಸ್ ನಿರ್ವಾಹಕರ ಸಹಯೋಗದಲ್ಲಿ ಸಂಚಾರ ಜಾಲ ವಿಸ್ತರಿಸಿಕೊಳ್ಳುವ ಯೋಜನೆಯನ್ನು ಫ್ಲಿಕ್ಸ್‌ಬಸ್ ಹೊಂದಿದೆ. ಹೆಚ್ಚಿನ ಅನುಕೂಲ, ಸುರಕ್ಷತೆ ಹಾಗೂ ಹೊರೆ ಎನಿಸದ ದರಗಳ ಮೂಲಕ ಬಸ್ ಪ್ರಯಾಣಿಕರ ವಿಶ್ವಾಸಗಳಿಸುವ ಗುರಿ ಹೊಂದಿದೆ ಎಂದರು.

ಬಸ್ ಸಂಚಾರದಲ್ಲಿ ಭಾರತ ಜಗತ್ತಿನ ಎರಡನೇ ದೊಡ್ಡ ಮಾರುಕಟ್ಟೆಯಾಗಿದೆ. ಪರಿಸರ ಸ್ನೇಹಿ ಇಂಧನಗಳ ಬಳಕೆಗೆ ಒತ್ತು ನೀಡಿ ದೇಶದಲ್ಲಿ ಸುಸ್ಥಿರ ಸಂಚಾರಕ್ಕೆ ಕೊಡುಗೆ ನೀಡಲು ಸಂಸ್ಥೆಯು ಆದ್ಯತೆ ನೀಡಬೇಕೆಂದು ಸಚಿವರು ಹೇಳಿದರು. ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಅನೆಟ್ ಬೆಸಿಯರ್, ಫ್ಲಿಕ್ಸ್ ಬಸ್ ಸಹ-ಸ್ಥಾಪಕ ಡೇನಿಯಲ್ ಕ್ರೌಸ್, ಫ್ಲಿಕ್ಸ್‌ಬಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೂರ್ಯ ಖುರಾನ ಅವರು ಈ ವೇಳೆ ಇದ್ದರು.