ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗಣೇಶ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಶನಿವಾರ (ಸೆ.07) ರಂದು ಪ್ರಾಣಿವಧೆ ಮತ್ತು ಮಾಂಸ ಮಾರಟವನ್ನು ಬಿಬಿಎಂಪಿ ನಿಷೇಧಿಸಿದೆ. ಈ ಕುರಿತು ಬಿಬಿಎಂಪಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಸೆ.07ರ ಶನಿವಾರ ಗಣೇಶ ಚರುರ್ಥಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರುವಂತಿಲ್ಲ. ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು (ಪಶುಪಾಲನೆ) ಸುತ್ತೋಲೆ ಹೊರಡಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿ ಕೂಡ ನೀಡಲಾಗಿದೆ.

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರವಹಿಸುವಂತೆ ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ ಕೆಲ ಮಾರ್ಗ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂ, ವಿದ್ಯುತ್ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಿ. ಜಾಗರೂಕರಾಗಿರಿ, ಯಾವುದೇ ವಿದ್ಯುತ್ ಅವಘಡಗಳಿಗೆ ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ. ಒಟ್ಟಾಗಿ, ನಾವು ಈ ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸ್ಮರಣೀಯವಾಗಿಸೋಣ ಎಂದು ಬೆಸ್ಕಾಂ ತಿಳಿಸಿದೆ.

— Bruhat Bengaluru Mahanagara Palike (@Bbmpcares) September 4, 2024