ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳು ಇತ್ತೀಚೆಗೆ ತನ್ನ ಸೇವೆಗಳನ್ನು ಉತ್ತರ ಭಾರತಕ್ಕೂ ವಿಸ್ತರಿಸಿ ಜನರ ಮೆಚ್ಚುಗೆಯನ್ನು ಗಳಿಸುತ್ತಿದೆ. ಇದೀಗ ನಂದಿನಿ ಇ-ಕಾಮರ್ಸ್ ಆಪ್ಗಳಲ್ಲೂ ಮಾರಾಟ ಮಾಡಲು ಸಜ್ಜಾಗಿದೆ.
ಖಾಸಗಿ ಬ್ರ್ಯಾಂಡ್ಗಳಿಗೆ ಪೈಪೋಟಿ ನೀಡಲು ಕೆಎಂಎಫ್ ತನ್ನ ಮಾರಾಟವನ್ನು ವಿಸ್ತರಿಸಲು ಸಜ್ಜಾಗಿದೆ. ನಂದಿನಿ ಉತ್ಪನ್ನಗಳು ಇನ್ಮುಂದೆ ಎಲ್ಲಾ ಚಿಲ್ಲರೆ ಮಳಿಗೆಗಳು, ಆಪ್ಗಳು, ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಮಾತ್ರವಲ್ಲದೇ ಮಾಲ್ಗಳಲ್ಲೂ ಲಭ್ಯವಾಗಲಿದೆ. ಏಪ್ರಿಲ್ 1 ರಿಂದ ನಂದಿನಿ ಉತ್ಪನ್ನಗಳು ಇ-ಕಾಮರ್ಸ್ ವೇದಿಕೆಗಳಲ್ಲಿ ಲಭ್ಯವಾಗಲಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್, ಬ್ಲಿಂಕಿಟ್, ಬಿಗ್ಬಾಸ್ಕೆಟ್, ಜೆಪ್ಟೋದಂತಹ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಾಗುತ್ತಿದೆ. ಇದರಿಂದಾಗಿ ಇಡ್ಲಿ, ದೋಸೆ ಹಿಟ್ಟು ಸೇರಿದಂತೆ ನಂದಿನಿ ಉತ್ಪನ್ನಗಳು ಮನೆ ಬಾಗಿಲಿಗೆ ಬಂದು ಸುಲಭವಾಗಿ ಗ್ರಾಹಕರನ್ನು ತಲುಪಲಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಬಿಡುಗಡೆ ಮಾಡಿತ್ತು. ಈ ಉತ್ಪನ್ನವನ್ನು ಗ್ರಾಹಕರು ಮೆಚ್ಚಿದ್ದು, ಭಾರೀ ಬೇಡಿಕೆಯೂ ಬರುತ್ತಿದೆ. ಇನ್ನು ಇದು ಗ್ರಾಹಕರ ಕೈಗೆ ಸುಲಭವಾಗಿ ತಲುಪಲು ಕರ್ನಾಟಕ ಹಾಲು ಒಕ್ಕೂಟ ನಿರ್ಧಾರ ಮಾಡಿ ಸೇವೆಯನ್ನು ವಿಸ್ತರಿಸಲು ಮುಂದಾಗಿದೆ.

