ಕನಕಪುರ: ವಾಹನಕ್ಕೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಯತ್ನಿಸಿದ ಸರಕು ಸಾಗಣೆ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿರುವ ಘಟನೆ ನಗರದ ಸಂಗಮ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ತಮಿಳುನಾಡು ಮೂಲದ ಶಿವರಾಜು (40) ಮೃತರು. ಅವರ ತಂದೆಯೊಂದಿಗೆ ನಾಟಿ ಕೋಳಿ ಮರಿಗಳನ್ನು ಮಾರಾಟಕ್ಕೆಂದು ತಮಿಳುನಾಡಿನಿಂದ ಕನಕಪುರಕ್ಕೆ ತರುತ್ತಿದ್ದಾಗ ಕೋಡಿಹಳ್ಳಿ ರಸ್ತೆ ಲಕ್ಷ್ಮಿಬಾಯ್ಲರ್ ಕೋಳಿ ಅಂಗಡಿ ಬಳಿ ನಾಯಿ ಅಡ್ಡ ಬಂದಿದೆ.

ತಪ್ಪಿಸಲು ಪ್ರಯತ್ನಿಸಿದಾಗ ವಾಹನ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಶಿವರಾಜು ಎದೆಗೆ ಗಂಭೀರ ಪೆಟ್ಟು ಬಿದ್ದಿತ್ತು. ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದರು. ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.