ಬೆಂಗಳೂರು: ಸಾಕುಪ್ರಾಣಿ ಪ್ರಿಯರಿಗೆ ಅದರಲ್ಲಿಯೂ ಶ್ವಾನಪ್ರಿಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುಡ್‌ನ್ಯೂಸ್ ನೀಡಿದೆ. ವಸತಿ ಕಲ್ಯಾಣ ಸಂಘಗಳು ಹೌಸಿಂಗ್ ಸೊಸೈಟಿಗಳ ಒಳಗೆ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಾಗರಿಕ ಸಂಸ್ಥೆ ಕೂಡ ಇದನ್ನೇ ಒತ್ತಿ ಹೇಳಿದೆ. ಇದರ ಜತೆಗೆ ಬಿಬಿಎಂಪಿ ಸಾಕುಪ್ರಾಣಿಗಳಿಗೆ ಆಹಾರ ನೀಡುವ ಸಮುದಾಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಇದರ ಜತೆಗೆ ಕೋಲುಗಳಿಂದ ನಾಯಿಗಳನ್ನು ಓಡಿಸುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುವುದು ಮತ್ತು ಎಲ್ಲ ಸಾರ್ವಜನಿಕ ಉದ್ಯಾನಗಳು, ಟೆಕ್ ಪಾರ್ಕ್‌ಗಳು ಮತ್ತಿತರ ಸಂಸ್ಥೆಗಳು ತಮ್ಮ ಆವರಣದಲ್ಲಿ ಸಾಕುಪ್ರಾಣಿಗಳ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ.
ಆಹಾರ ನೀಡುವಾಗ ಪಾಲಿಸಬೇಕಾದ ಮಾರ್ಗಸೂಚಿ
- ಬೀದಿ ನಾಯಿಗಳಿಗೆ ಆಹಾರವನ್ನು ನೀಡುವವರು ಮಾಂಸ ಮತ್ತು ಸಕ್ಕರೆ ಬಿಸ್ಕೇಟುಗಳನ್ನು ತಪ್ಪಿಸಲು ಸೂಚಿಸಲಾಗಿದೆ. ಏಕೆಂದರೆ ಇವು ಅವುಗಳನ್ನು ಹೈಪರ್ ಆ್ಯಕ್ಟೀವ್ ಮಾಡುವ ಸಾಧ್ಯತೆ ಇದೆ.
- ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಆಹಾರ ನೀಡಬಾರದು.
- ಸೌಮ್ಯ ಆಹಾರವನ್ನು ಒದಗಿಸಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಪ್ರಾಣಿಗಳು ಆಕ್ರಮಣಕಾರಿಯಾಗಿ ವರ್ತಿಸುವುದನ್ನು ತಡೆಯುತ್ತದೆ.
- ಜಾಸ್ತಿ ಜನರ ಓಡಾಟ ಇದ್ದಾಗ ಆಹಾರವನ್ನು ನೀಡಬಾರದು.
- ಸಾಕುಪ್ರಾಣಿಗಳ ಮಾಲೀಕರು ನೈರ್ಮಲ್ಯವನ್ನು ಕಾಪಾಡಬೇಕು ಮತ್ತು ಅವುಗಳನ್ನು ನಿಯಮಿತವಾಗಿ ಸ್ನಾನ ಮಾಡಿಸಿ ಆರೋಗ್ಯ ಪರಿಶೀಲಿಸುತ್ತಿರಬೇಕು.

