ಬೆಂಗಳೂರು ಗ್ರಾಮಾಂತರ: ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರಕಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಕೆ. ಸುಧಾಕರ್ ಅವರು ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ, ಹಿಂದುಳಿದವರ, ಬಡವರಪರ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದು ಜನಸಾಮಾನ್ಯರಿಗೆ 5 ಲಕ್ಷದವರೆಗಿನ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಪ್ರತಿಯೊಬ್ಬರು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಿ ಎಂದರು.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 4885 ರೈತರು ನೋಂದಣಿ ಯಾಗಿದ್ದಾರೆ. ಜಿಲ್ಲೆಯ ರೈತರು ತೋಟಗಾರಿಕೆ ಹಾಗೂ ಕೃಷಿ ವಾಣಿಜ್ಯ ಬೆಳೆಗಳನ್ನು ಹೆಚ್ಚು ಬೆಳೆಯುತ್ತಾರೆ. ಒಮ್ಮೆ ನಷ್ಟವಾದರೆ ರೈತರಿಗೆ ಬಹಳ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಮಾಡಿಸುವುದರಿಂದ ಆಗುವಂತಹ ಅನುಕೂಲಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಅರಿವು ಮೂಡಿಸಿ ಈ ವರ್ಷ ನೋಂದಣಿ ಹೆಚ್ಚಿಸಿ ಎಂದರು.

ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಒಳ್ಳೆಯ ಗುಣಮಟ್ಟದ ಅಕ್ಕಿಯನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು ಒಂದು ಕೆ.ಜಿ ಅಕ್ಕಿಗೆ 29 ರೂಪಾಯಿಗಳು ಮಾತ್ರ. ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸಿ ಎಂದರಲ್ಲದೆ, ಗ್ಯಾಸ್ ಸಂಪರ್ಕ ಹೊಂದಿಲ್ಲದ 3098 ಕುಟುಂಬಗಳ ಜಿಲ್ಲೆಯಲ್ಲಿದ್ದು ಅಂತವರಿಗೆ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸಿ ಎಂದರು.

ಒಂದು ದೇಶ ಒಂದು ಪಡಿತರ ಯೋಜನೆ ಜಾರಿಯಾಗಿ ದೇಶದ ಜನರು ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ಬೇಕಾದರೂ ಪಡಿತರ ಪಡೆಯಬಹುದಾದ ಸೌಲಭ್ಯವಿದೆ. ಆದರೆ ಹೊರ ರಾಜ್ಯದಿಂದ ಬಂದು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ನಮ್ಮ ರಾಜ್ಯದಲ್ಲಿ ಪಡಿತರ ಪಡೆಯಲು ಆಗುತ್ತಿಲ್ಲ ಎಂಬ ಮಾಹಿತಿ ಬಂದಿದ್ದು ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ವರದಿ ಸಲ್ಲಿಸಿ ಎಂದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಗತಿ ಸಾಧಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ತಿಂಗಳಿಗೊಮ್ಮೆ ಎಲ್ಲಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಜತೆಗೆ ಮಧ್ಯಾಹ್ನದ ಬಿಸಿಯೂಟ ಮಾಡಬೇಕು. ಇದರಿಂದ ಆಹಾರದ ಗುಣಮಟ್ಟ ಹಾಗೂ ಅಧಿಕಾರಿಗಳ ಕಾರ್ಯಕ್ಷಮತೆ ಕಾಣಬಹುದು ಎಂದರು.

ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಪ್ರಸ್ತಾವನೆ, ಅನುದಾನ, ಕಾಮಗಾರಿ ಹಾಗೂ ಇನ್ನಿತರ ಬಾಕಿ ಇರುವ ಕೆಲಸಗಳ ಬಗ್ಗೆ ಸಂಬಂಧಪಟ್ಟ ಆಯಾ ಇಲಾಖೆಗಳು ವರದಿ ಸಿದ್ಧಪಡಿಸಿ ಮಾಹಿತಿ ನೀಡಿ , ವರದಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಕಾರ್ಯ ರೂಪಕ್ಕೆ ತರುವಲ್ಲಿ ಕೆಲಸ ಮಾಡಲಾಗುವುದು. ಸರಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಸಹಕಾರದಿಂದ ಕೆಲಸ ಮಾಡಿದರೆ ಸಮರ್ಪಕವಾಗಿ ಯೋಜನೆಗಳು ‌ಜನರನ್ನು ತಲುಪಲಿದೆ ಎಂದರು.

ಸಭೆಯಲ್ಲಿ ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್ ಅನುರಾಧ, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಇಒ ಗಳು, ಉಪಸ್ಥಿತರಿದ್ದರು.