ಬೆಂಗಳೂರು: ಮಹಾ ಕುಂಭಮೇಳ ಪ್ರವಾಸದ ಪ್ಯಾಕೇಜ್‌ ಹೆಸರಿನಲ್ಲಿ ವಂಚಿಸಿದ್ದ ಓರ್ವ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಕಂಪನಿಯ ಪ್ರತಿನಿಧಿಯ ಹೆಸರಿನಲ್ಲಿ ಫೇಸ್‌ಬುಕ್‌ ಹಾಗೂ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ನಕಲಿ ಜಾಹೀರಾತು ನೀಡಿದ್ದ ಆರೋಪಿ, ಸಾರ್ವಜನಿಕರಿಂದ ಹಣ ಪಡೆದು ಟಿಕೆಟ್ ಬುಕ್ ಮಾಡದೇ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂಭಮೇಳಕ್ಕೆ ತೆರಳಲು ಪ್ರವಾಸದ ಪ್ಯಾಕೇಜ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಆರೋಪಿ, ಕೆಲವರಿಗೆ ಟಿಕೆಟ್ ಬುಕ್ ಮಾಡಿ ನಂತರ ಕ್ಯಾನ್ಸಲ್ ಮಾಡುತ್ತಿದ್ದ. ಇನ್ನೂ ಕೆಲವರಿಗೆ ಪ್ರಯಾಗ್ ರಾಜ್ ತಲುಪಿದ ನಂತರ ರಿಟರ್ನ್ ಟಿಕೆಟ್ ಬುಕ್ ಮಾಡುತ್ತಿರಲಿಲ್ಲ. ಬಳಿಕ ಹಣ ನೀಡಿದ್ದವರ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ.

ಆರೋಪಿಯಿಂದ ವಂಚನೆಗೊಳಗಾದ ಅನೇಕರು ಗೋವಿಂದರಾಜ ನಗರ ಠಾಣೆಗೆ ದೂರು‌ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಗೋವಿಂದರಾಜ ನಗರ ಠಾಣೆ ಪೊಲೀಸರು, ರಾಘವೇಂದ್ರ ರಾವ್ ಎಂಬಾತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಅನೇಕ ಜನರಿಗೆ ವಂಚಿಸಿದ ಪರಿಣಾಮ ಬಂದ ಹಣದಲ್ಲಿ ಆರೋಪಿ ಬೆಟ್ಟಿಂಗ್ ಆಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಬಂಧಿತನ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.