ಬೆಂಗಳೂರು: ವಿದೇಶಿ ಮೂಲದ ಮಹಿಳೆ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉಜ್ಬೇಕಿಸ್ತಾನದ ಜರೀನಾ ಎಂಬ ವಿದೇಶಿ ಮಹಿಳೆ ಮೃತ ದುದ್ರೈವಿ.
ನಾಲ್ಕು ದಿನಗಳ ಹಿಂದೆ ಟೂರಿಸ್ಟ್ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಮಹಿಳೆ ಬಿಡಿಎ ಮೇಲ್ಸೇತುವೆ ಬಳಿಯ ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಳು. ಹೋಟೆಲ್ನ ಎರಡನೇ ಮಹಡಿಯಲ್ಲಿ ಕೊಠಡಿಯಲ್ಲಿ ವಾಸವಿದ್ದಳು. ಆದರೆ ನಿನ್ನೆ ಸಂಜೆಯಿಂದ ಯಾವುದೇ ಪ್ರತಿಕ್ರಿಯೆ ಮಹಿಳೆ ಕಡೆಯಿಂದ ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡು ಹೋಟೆಲ್ ಸಿಬ್ಬಂದಿ ಮಾಸ್ಟರ್ ಕೀ ಮೂಲಕ ರೂಮ್ ತೆರೆದಿದ್ದಾರೆ. ಈ ವೇಳೆ ಪರಿಶೀಲಿಸಿದಾಗ ಮಹಿಳೆ ಮೃತ ದೇಹ ಪತ್ತೆಯಾಗಿದೆ.
ದೇಹದ ಮೇಲೆ ಗಾಯದ ಕಲೆಗಳು ಪತ್ತೆಯಾಗಿದ್ದು, ಯಾರೋ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ , ಶೇಷಾದ್ರಿಪುರಂ ಪೊಲೀಸರು ಸಿಸಿಟಿವಿ ಹಾಗೂ ಲೆಡ್ಜರ್ ಬುಕ್ ಪರಿಶೀಲನೆ ನಡೆಸುತ್ತಿದ್ದಾರೆ.