ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆಯ ನಗರದಲ್ಲಿರುವ ಪ್ರಸಿದ್ಧ ‘ಕೆಎಫ್‌ಸಿ’ ಹಾಗೂ ‘ಮೆಕ್‌ಡೊನಾಲ್ಡ್ಸ್’ ನಂತಹ ಜಂಕ್ ಫುಡ್ ಔಟ್‌ಲೆಟ್‌ಗಳು ಸೇರಿದಂತೆ ವಿವಿಧ ಹೋಟೆಲ್‌ಗಳ ಮೇಲೆ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ.

ನಗರದಾದ್ಯಂತ ಸುಮಾರು 30ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಂಕ್ ಫುಡ್ ತಯಾರಿಕೆಗೆ ಬಳಸುವ ಪದಾರ್ಥಗಳು ಮತ್ತು ಅಡುಗೆ ಮನೆಯ ಶುಚಿತ್ವವನ್ನು ಅಧಿಕಾರಿಗಳು ಹತ್ತಿರದಿಂದ ತಪಾಸಣೆ ನಡೆಸಿದರು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ.

ಪರಿಶೀಲನೆ ವೇಳೆ ಕೆಎಫ್‌ಸಿ ರೆಸ್ಟೋರೆಂಟ್‌ಗಳ ಕಿಚನ್‌ಗಳಲ್ಲಿ ಬಳಸಲಾಗುತ್ತಿದ್ದ ಸಾಸ್‌ಗಳಿಗೆ ಯಾವುದೇ ಬ್ರ್ಯಾಂಡ್ ಲೇಬಲ್ ಇಲ್ಲದಿರುವುದು ಪತ್ತೆಯಾಗಿದೆ. ಬಳಕೆಯಾಗುವ ಸಾಸ್ ಯಾವ ಬ್ರ್ಯಾಂಡ್‌ಗೆ ಸೇರಿದ್ದು ಮತ್ತು ಅದರ ತಯಾರಿಕಾ ದಿನಾಂಕದ ಲೇಬಲ್ ಕಡ್ಡಾಯವಾಗಿ ಇರಬೇಕು ಎಂದು ಅಧಿಕಾರಿಗಳು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಇದರೊಂದಿಗೆ ಬರ್ಗರ್‌ಗೆ ಬಳಸುವ ಬನ್‌ಗಳು, ಫ್ರೋಜನ್ ಚಿಕನ್ ಹಾಗೂ ಕರಿಯಲು ಬಳಸುವ ಎಣ್ಣೆಯ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಿದರು. ಅನುಮಾನಾಸ್ಪದವಾಗಿ ಕಂಡುಬಂದ ಕೆಲವು ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.