ಬೆಂಗಳೂರು: ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯ ಭದ್ರತೆಗೆ ಧಕ್ಕೆಯಾಗದಂತೆ ತಡೆಯಲು ಆಹಾರ ಸುರಕ್ಷತಾ ಮತ್ತು ಔಷಧ ನಿಯಂತ್ರಣ ಇಲಾಖೆಯು ರಾಜ್ಯಾದ್ಯಂತ ಬೃಹತ್ ತಪಾಸಣಾ ಅಭಿಯಾನ ನಡೆಸಿದೆ.
ಬಸ್ ನಿಲ್ದಾಣಗಳು, ಹೈವೇ ಡಾಬಾಗಳು, ಹಾಸ್ಟೆಲ್‌ಗಳು ಹಾಗೂ ಪ್ರಸಿದ್ಧ ಹೋಟೆಲ್‌ಗಳ ಮೇಲೆ ಇಲಾಖೆಯ ಅಧಿಕಾರಿಗಳ ತಂಡಗಳು ದಿಢೀರ್ ದಾಳಿ ನಡೆಸಿ ಆಹಾರದ ನೈರ್ಮಲ್ಯವನ್ನು ಪರಿಶೀಲಿಸಿವೆ. ಅಭಿಯಾನದ ಭಾಗವಾಗಿ ವಿವಿಧ ಬಸ್ ನಿಲ್ದಾಣಗಳಲ್ಲಿದ್ದ 889 ಆಹಾರ ಮಳಿಗೆಗಳನ್ನು ತಪಾಸಣೆ ಮಾಡಲಾಗಿದ್ದು, ಅಶುಚಿತ್ವದಿಂದ ಕೂಡಿದ್ದ 206 ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಇದರ ಜೊತೆಗೆ ನಿಯಮ ಉಲ್ಲಂಘಿಸಿದ ವ್ಯಾಪಾರಿಗಳಿಗೆ ದಂಡ ವಿಧಿಸಲಾಗಿದ್ದು, ಹೆದ್ದಾರಿ ಡಾಬಾಗಳ ಮೇಲೆಯೂ ಸಮಗ್ರ ಪರಿಶೀಲನೆ ನಡೆಸಿ ಸಾವಿರಾರು ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯದ 930ಕ್ಕೂ ಹೆಚ್ಚು ಹಾಸ್ಟೆಲ್‌ಗಳ ಅಡುಗೆ ಮನೆಗಳನ್ನು ಪರಿಶೀಲಿಸಲಾಗಿದ್ದು, 2,400ಕ್ಕೂ ಹೆಚ್ಚು ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಪಾಸಣೆ ವೇಳೆ ಕೆಟ್ಟುಹೋದ ಮಾಂಸ, ಮೀನು ಹಾಗೂ ಕೃತಕ ಬಣ್ಣ ಬೆರೆಸಿದ ಆಹಾರ ಪದಾರ್ಥಗಳು ಪತ್ತೆಯಾಗಿದ್ದು, ಅಪಾರ ಪ್ರಮಾಣದ ಅಸುರಕ್ಷಿತ ಸಾಮಗ್ರಿಗಳನ್ನು ತಕ್ಷಣವೇ ಸೀಜ್ ಮಾಡಿ ನಾಶಪಡಿಸಲಾಗಿದೆ.
ಇನ್ನು, ಹೆದ್ದಾರಿಗಳ ರಸ್ತೆ ಬದಿಯ 99 ಡಾಬಾಗಳ ಮೇಲೆ ಇಲಾಖೆಯ 5 ತನಿಖಾ ತಂಡಗಳ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ನ್ಯೂನತೆಗಳು ಕಂಡುಬಂದಿರುವ ಡಾಬಾಗಳಿಂದ 3,67,500 ರು. ದಂಡ ವಿಧಿಸಲಾಗಿದೆ. 236 ಗೋದಾಮುಗಳನ್ನು ತಪಾಸಣೆ ನಡೆಸಲಾಗಿದ್ದು, ನೈರ್ಮಲ್ಯ ಕಾಪಾಡದ 8 ಗೋದಾಮುಗಳಿಗೆ 1.97 ಲಕ್ಷ ರು. ದಂಡ ವಿಧಿಸಲಾಗಿದ. ಇನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿದ 44 ಗೋದಾಮುಗಳ ವಿರುದ್ಧ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಆಹಾರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರ್ಕಾರ, ಸಾರ್ವಜನಿಕರಿಗೆ ಕಳಪೆ ಅಥವಾ ಅನೈರ್ಮಲ್ಯ ಆಹಾರ ಕಂಡುಬಂದರೆ ದೂರು ನೀಡಲು ಅನುವಾಗುವಂತೆ ವಿಶೇಷ QR ಕೋಡ್ ವ್ಯವಸ್ಥೆ ಮತ್ತು ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಕಟ್ಟುನಿಟ್ಟಿನ ನಿಯಮ ಪಾಲಿಸದ ಮಳಿಗೆಗಳ ಪರವಾನಗಿ ರದ್ದುಪಡಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

