ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಮಲ್ಲಹಳ್ಳಿ ಬಳಿ ಗುರುವಾರ ಬೆಳ್ಳಂಬೆಳಗ್ಗೆ ಘೋರ ಅಗ್ನಿ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಪೆಟ್ರೋಲ್ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಟ್ಯಾಂಕರ್‌ನಲ್ಲಿ ತಕ್ಷಣವೇ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಇದೇ ವೇಳೆ ಮರಕ್ಕೆ ಡಿಕ್ಕಿ ಹೊಡೆದ ಪೆಟ್ರೋಲ್ ಲಾರಿಯು, ಪಕ್ಕದಲ್ಲೇ ರಿವರ್ಸ್ ತೆಗೆದುಕೊಳ್ಳುತ್ತಿದ್ದ ಮತ್ತೊಂದು ಹಾಲಿನ ಟ್ಯಾಂಕರ್‌ಗೂ ಜೋರಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಪೆಟ್ರೋಲ್ ಲಾರಿಯಲ್ಲಿದ್ದ ಬೆಂಕಿ ಕ್ಷಣಾರ್ಧದಲ್ಲಿ ಹಾಲಿನ ವಾಹನಕ್ಕೂ ವ್ಯಾಪಿಸಿದೆ. ಪೆಟ್ರೋಲ್ ಪ್ರಭಾವದಿಂದಾಗಿ ಬೆಂಕಿ ತೀವ್ರಗೊಂಡು, ರಸ್ತೆ ಮಧ್ಯದಲ್ಲೇ ಎರಡೂ ಬೃಹತ್ ಟ್ಯಾಂಕರ್‌ಗಳು ಸಂಪೂರ್ಣವಾಗಿ ಹೊತ್ತಿ ಉರಿದಿವೆ.

ವಾಹನಗಳಿಗೆ ಬೆಂಕಿ ಆವರಿಸುತ್ತಿದ್ದಂತೆ ಇಬ್ಬರೂ ಲಾರಿ ಚಾಲಕರು ತಕ್ಷಣವೇ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ಮಾಹಿತಿ ತಿಳಿದು ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.