ಬೆಂಗಳೂರು: ಯಲಹಂಕದ ಎಂ.ಎಸ್. ಪಾಳ್ಯದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ದುರಂತ ತಪ್ಪಿದೆ.
ಪ್ರಸಿದ್ಧ ಅವೇಕ್ಷಾ ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಆಸ್ಪತ್ರೆಯಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಆತಂಕದಿಂದ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದು ಈ ಅಗ್ನಿ ಅವಘಡಕ್ಕೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಮೂರು ಅಂತಸ್ತಿನ ಇಡೀ ಕಟ್ಟಡಕ್ಕೆ ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿದೆ. ಘಟನೆ ಸಂಭವಿಸಿದ ಭೀಕರ ಸಮಯದಲ್ಲಿ ಆಸ್ಪತ್ರೆಯ ಒಳಗೆ 20ಕ್ಕೂ ಹೆಚ್ಚು ಒಳರೋಗಿಗಳು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆಯ ಮೂರೂ ಮಹಡಿಗಳಿಂದ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ರೊಂಯ್ ಎಂದು ಏಳುತ್ತಿರುವುದನ್ನು ಕಂಡು ರೋಗಿಗಳು, ಅವರ ಸಂಬಂಧಿಕರು ಹಾಗೂ ಆಸ್ಪತ್ರೆಯ ನರ್ಸ್‌ಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಆಸ್ಪತ್ರೆಗೆ ಬೆಂಕಿ ಬಿದ್ದ ತಕ್ಷಣ ಪ್ರಾಣಭಯದಿಂದ ಕೆಲವು ರೋಗಿಗಳು ತಾವಾಗಿಯೇ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಇನ್ನು ಐಸಿಯು ಸೇರಿದಂತೆ ಇಲಾಖೆಗಳಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಉಳಿದ ರೋಗಿಗಳನ್ನು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಮತ್ತು ಸ್ಥಳೀಯ ಸಾರ್ವಜನಿಕರು ಭಾರಿ ಸಮಯಪ್ರಜ್ಞೆ ಮೆರೆದು ತಕ್ಷಣವೇ ಸ್ಟ್ರೆಚರ್ ಹಾಗೂ ವೀಲ್‌ಚೇರ್‌ಗಳ ಮೂಲಕ ಸಮೀಪದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿದ್ದರೂ, ಎಲ್ಲರ ಸಕಾಲಿಕ ಆಪರೇಷನ್‌ನಿಂದಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟು ಜಂಟಿಯಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸದ್ಯ ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

