ಬೆಂಗಳೂರು: ನಗರದ ನಾಗದೇವನಹಳ್ಳಿಯಲ್ಲಿರುವ ಪ್ರಸಿದ್ಧ ಚಿತ್ರಕೂಟ ಕೌಸಲ್ಯ ಶಾಲೆಯಲ್ಲಿ ಇಂದು ದಿಢೀರನೆ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ಶಾಲೆಯಲ್ಲಿ ಇಂದು ಪೋಷಕರ ಸಭೆ ಇದ್ದ ಹಿನ್ನೆಲೆಯಲ್ಲಿ ಮಕ್ಕಳಿಗೆ ತರಗತಿಗಳು ಇರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಯಾರೂ ಶಾಲೆಯಲ್ಲಿ ಉಪಸ್ಥಿತರಿರಲಿಲ್ಲ. ಒಂದು ವೇಳೆ ಎಂದಿನಂತೆ ತರಗತಿಗಳು ನಡೆದು ಮಕ್ಕಳು ಶಾಲೆಯೊಳಗಿದ್ದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆಯಿತ್ತು.

ಇನ್ನು ಈ ಶಾಲೆಯ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಬೆಂಕಿ ಏನಾದರೂ ಪಕ್ಕದ ಪೆಟ್ರೋಲ್ ಬಂಕ್‌ಗೆ ವ್ಯಾಪಿಸಿದ್ದರೆ ಇಡೀ ಪ್ರದೇಶವೇ ಭಸ್ಮವಾಗುವಂತಹ ಭೀಕರ ಪರಿಸ್ಥಿತಿ ಎದುರಾಗುತ್ತಿತ್ತು.

ಸ್ಥಳೀಯರ ಸಕಾಲಿಕ ಮಾಹಿತಿ ಮೇರೆಗೆ ತಕ್ಷಣವೇ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಜಂಟಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬೆಂಕಿ ನಂದಿಸುವ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಅಥವಾ ಬೇರೆ ಯಾವುದಾದರೂ ಕಾರಣದಿಂದ ಬೆಂಕಿ ತಗುಲಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.