ಬೆಂಗಳೂರು: ಮೆಟ್ರೋ ರೈಲು ಹಾಗೂ ನಿಲ್ದಾಣಗಳಲ್ಲಿ ಸುರಕ್ಷತೆ ಮತ್ತು ಸಾರ್ವಜನಿಕ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌) ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ ಪರಿಷ್ಕೃತ ದಂಡದ ನಿಯಮಾವಳಿಯನ್ನು ಜಾರಿಗೊಳಿಸಿದೆ. ನಿಯಮ ಉಲ್ಲಂಘಿಸುವ ಸವಾರರಿಗೆ ಇನ್ಮುಂದೆ ಬರೋಬ್ಬರಿ 25 ಸಾವಿರ ರೂ.ವರೆಗೆ ದಂಡ ವಿಧಿಸಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಮೆಟ್ರೋ ಹಳಿಗಳ (ಟ್ರ್ಯಾಕ್‌) ಮೇಲೆ ಅನಧಿಕೃತವಾಗಿ ಪ್ರವೇಶಿಸುವುದು, ಓಡಾಡುವುದು ಅಥವಾ ಜಿಗಿಯುವುದನ್ನು ಅತ್ಯಂತ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಇಂತಹ ಜೀವಕ್ಕೆ ಕಂಟಕ ತರುವ ಕೃತ್ಯಗಳಿಗೆ ಕನಿಷ್ಠ 5 ಸಾವಿರದಿಂದ ಗರಿಷ್ಠ 25 ಸಾವಿರ ರೂವರೆಗೆ ದಂಡ ವಿಧಿಸಲಾಗುತ್ತದೆ. ಇದರೊಂದಿಗೆ, ಟಿಕೆಟ್‌ ಅಥವಾ ಸ್ಮಾರ್ಟ್‌ಕಾರ್ಡ್‌ಗಳ ದುರ್ಬಳಕೆಗೂ ಇದೇ ಪ್ರಮಾಣದ ದಂಡ ಅನ್ವಯವಾಗಲಿದೆ.

ಇನ್ನು ಮೆಟ್ರೋ ಆವರಣದಲ್ಲಿ ಅನುಮತಿ ಇಲ್ಲದೆ ವ್ಯಾಪಾರಕ್ಕಿಳಿದರೆ 5 ಸಾವಿರ ರೂ. ದಂಡ ತೆರಬೇಕಾಗುತ್ತದೆ. ಮೆಟ್ರೋ ರೈಲಿನಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ರೀಲ್ಸ್‌ ಹಾವಳಿ, ಜೋರಾಗಿ ಹಾಡು ಕೇಳುವುದು, ನೆಲದ ಮೇಲೆ ಕುಳಿತುಕೊಳ್ಳುವುದು ಹಾಗೂ ಆಹಾರ ಸೇವಿಸುವುದಕ್ಕೂ ಇನ್ಮುಂದೆ ಬ್ರೇಕ್‌ ಬೀಳಲಿದೆ. ಈ ಹಿಂದೆ ಇಂತಹ ಉಲ್ಲಂಘನೆಗಳಿಗೆ 500 ರೂ. ದಂಡ ಇತ್ತು. ಆದರೆ ಈಗ ಅದನ್ನು 2,500ರಿಂದ 10 ಸಾವಿರ ರೂ.ವರೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಮೆಟ್ರೋ ಸೌಂದರ್ಯಕ್ಕೆ ಧಕ್ಕೆ ತರುವವರ ವಿರು ದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ. ನಿಲ್ದಾಣಗಳ ಗೋಡೆ ಗಳ ಮೇಲೆ ಗೀಚುವುದು, ಚಿತ್ರ ಬರೆಯುವುದು ಅಥವಾ ಅನಧಿಕೃತವಾಗಿ ಪೋಸ್ಟರ್‌ಅಂಟಿಸಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಮದ್ಯಪಾನ ಮಾಡಿ ಪ್ರಯಾಣಿಸುವುದು, ಅಸಭ್ಯ ವರ್ತನೆ, ಸಹಪ್ರಯಾ ಣಿಕರೊಂದಿಗೆ ಜಗಳವಾಡುವುದು, ನಿಲ್ದಾಣಗಳಲ್ಲಿ ಉಗುಳುವುದು ಹಾಗೂ ಪಟಾಕಿ, ಸ್ಫೋಟಕ ಅಥವಾ ಅಪಾಯಕಾರಿ ರಾಸಾಯನಿಕಗಳನ್ನು ಸಾಗಿಸುವುದಕ್ಕೆ ತಲಾ 2,500 ರೂ. ದಂಡ ನಿಗದಿಪಡಿಸಲಾಗಿದೆ.

ಪರಿಷ್ಕೃತ ನಿಯಮಾವಳಿಯ ಮತ್ತೂಂದು ಕಠಿಣ ನಿಯಮವೆಂದರೆ, ಈಗ ಜಾರಿಗೆ ತಂದಿರುವ ಎಲ್ಲಾ ದಂಡದ ಮೊತ್ತವನ್ನು ಪ್ರತಿ 3 ವರ್ಷಗಳಿಗೊಮ್ಮೆ ಶೇ.10 ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸಲಾಗುತ್ತದೆ. ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ ಮತ್ತು ಪ್ರಯಾಣಿಕ ಸ್ನೇಹಿಯಾಗಿಸಲು ಈ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟಪಡಿಸಿದೆ.