ಆನೇಕಲ್: ರಸ್ತೆಯಲ್ಲಿ ಎದುರು ಬಂದ ಕಾರನ್ನು ಹಿಂದಕ್ಕೆ ತೆಗೆಯುವಂತೆ ಹೇಳಿದ್ದಕ್ಕೆ, ಪುಡಿರೌಡಿಗಳಿಬ್ಬರು ತಂದೆ ಮತ್ತು ಮಗನಿಗೆ ಚಾಕುವಿನಿಂದ ಇರಿದು ಭೀಕರ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಆನೇಕಲ್ ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ಜರುಗಿದೆ. ಸಿಂಗಸಂದ್ರ ಗ್ರಾಮದ ನಿವಾಸಿಗಳಾದ ನವೀನ್ (42) ಹಾಗೂ ಅವರ 16 ವರ್ಷದ ಮಗ ತಾರಕೇಶ್ ಗೌಡ ಹಲ್ಲೆಗೊಳಗಾದ ದುರ್ದೈವಿಗಳು.

ನಿನ್ನೆ ರಾತ್ರಿ ಇವರಿಬ್ಬರು ಕಾರಿನಲ್ಲಿ ಹೋಗುತ್ತಿದ್ದಾಗ ತಿಮ್ಮರಾಯಸ್ವಾಮಿ ದೇವಾಲಯ ರಸ್ತೆಯಲ್ಲಿ ಎದುರುಗಡೆಯಿಂದ ಮತ್ತೊಂದು ಕಾರು ಬಂದಿದೆ. ಈ ವೇಳೆ ನವೀನ್ ಅವರು ಎದುರು ಬಂದ ಕಾರಿನಲ್ಲಿದ್ದವರಿಗೆ ‘ಕಾರನ್ನು ಸ್ವಲ್ಪ ಹಿಂದಕ್ಕೆ ತೆಗೆಯಿರಿ’ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಗಲಾಟೆ ಆರಂಭವಾಗಿದೆ.

ಎದುರಿನ ಕಾರಿನಲ್ಲಿದ್ದ ಆದಿ ಮತ್ತು ಕಿರಣ್ ಎಂಬ ಪುಡಿರೌಡಿಗಳು ಆಗಲೇ ಪೂರ್ಣ ಪ್ರಮಾಣದಲ್ಲಿ ನಶೆಯ ಗುಂಗಿನಲ್ಲಿದ್ದರು ಎನ್ನಲಾಗಿದೆ. ಕಾರು ಹಿಂದಕ್ಕೆ ತೆಗೆಯುವಂತೆ ನವೀನ್ ಹೇಳುತ್ತಿದ್ದಂತೆ ರೊಚ್ಚಿಗೆದ್ದ ಈ ಇಬ್ಬರು ಪುಡಿರೌಡಿಗಳು, ನವೀನ್ ಹಾಗೂ ಆತನ ಮಗ ತಾರಕೇಶ್ ಗೌಡ ಮೇಲೆ ಏಕಾಏಕಿ ಮುಗಿಬಿದ್ದು ಭೀಕರ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ ತಮ್ಮ ಬಳಿಯಿದ್ದ ಚಾಕುವನ್ನು ತೆಗೆದು ನವೀನ್ ಮತ್ತು ಅವರ ಮಗನ ಹೊಟ್ಟೆಯ ಭಾಗಕ್ಕೆ ಇರಿದಿದ್ದಾರೆ.

ಬಾಪೂಜಿ ನಗರದ ರಸ್ತೆಯಲ್ಲಿ ತಂದೆ-ಮಗನ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಸಾರ್ವಜನಿಕರು ಒಟ್ಟಾಗಿ ಹಲ್ಲೆ ನಡೆಸುತ್ತಿದ್ದ ಆರೋಪಿಗಳ ಪೈಕಿ ಆದಿ ಎಂಬಾತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೇ ವೇಳೆ ಮತ್ತೊಬ್ಬ ಆರೋಪಿ ಕಿರಣ್ ಸ್ಥಳದಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದಾನೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ನವೀನ್ ಹಾಗೂ ತಾರಕೇಶ್ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.