ಬೆಂಗಳೂರು: ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ವೃದ್ಧೆಯೊಬ್ಬರು ಬುಧವಾರ ಮೃತಪಟ್ಟ ದಾರುಣ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಏರ್‌ಫೋರ್ಸ್‌ ಕ್ಯಾಂಪಸ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ರಾಜ್ ದುಲಾರಿ ಸಿನ್ಹಾ (76) ಮೃತಪಟ್ಟ ಮಹಿಳೆಯಾಗಿದ್ದಾರೆ. ಜಾಲಹಳ್ಳಿಯ ಏರ್‌ಫೋರ್ಸ್ ಈಸ್ಟ್ 7ನೇ ರೆಸಿಡೆನ್ಶಿಯಲ್ ಕ್ಯಾಂಪ್‌ನಲ್ಲಿರುವ ಪುಟ್‌ಬಾಲ್‌ ಮೈದಾನದಲ್ಲಿ ಬೆಳಗ್ಗೆ 6.30 ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಮಹಿಳೆ ಮೇಲೆ 10-12 ನಾಯಿಗಳು ಏಕಾಏಕಿ ದಾಳಿ ನಡೆಸಿವೆ.

ನಾಯಿಗಳ ಹಿಂಡು ವೃದ್ದೆಯ ತಲೆ ಭಾಗದ ಚರ್ಮವನ್ನು ಕಿತ್ತು ಹಾಕಿವೆ. ಮುಖದ ಭಾಗವನ್ನು ಕಚ್ಚಿವೆ, ಬಲಗೈಗೆ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ವಾಯುವಿಹಾರ ಮಾಡುತ್ತಿದ್ದ ಏರ್‌ಪೋರ್ಸ್‌ ಅಧಿಕಾರಿ ಹೇಮಚಂದ್‌ ಎಂಬುವವರು ಬಂದು ನಾಯಿಗಳನ್ನು ಓಡಿಸಿದ್ದಾರೆ. ಮಹಿಳೆಯ ಅಳಿಯ ಎ.ಕೆ.ಸಿಂಗ್‌ ಅವರಿಗೆ ಫೋನ್‌ ಮಾಡಿ ಮಾಹಿತಿ ನೀಡಿದ್ದಾರೆ.

ನಂತರ ಹೇಮಚಂದ್‌ ಹಾಗೂ ಎ.ಕೆ.ಸಿಂಗ್‌ ಅವರು ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ನಿವೃತ್ತ ಶಿಕ್ಷಕಿಯಾಗಿರುವ ಮಹಿಳೆ ಅಳಿಯ-ಮಗಳನ್ನು ಭೇಟಿಯಾಗಲು ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.