ಬೆಂಗಳೂರು: ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸುವ ತರಬೇತಿ ಕಾರ್ಯಕ್ರಮಕ್ಕೆ ಇಲ್ಲಿನ ಮದನಾಯಕನಹಳ್ಳಿ ಗ್ರಾಮದ ಬಸವೇಶ್ವರ ಲೇಔಟ್ನಲ್ಲಿ ಚಾಲನೆ ನೀಡಲಾಯಿತು.
ಎಂಎಸ್ಡಿಪಿ-156 ಉದ್ಯಮಶೀಲತಾ ಅಭಿವೃದ್ಧಿ (ಇಡಿಪಿ) ತರಬೇತಿ, ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (EDII) ವತಿಯಿಂದ, ‘ಸ್ಕಿಲ್ ಟು ಸಕ್ಸೀಡ್ ಅಕ್ಸೆನ್ಚರ್ ಇಡಿಐಐ ವಿ ಆಕ್ಟ್ ಯೋಜನೆಯಡಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘದ ಸದಸ್ಯರು ಹಾಗೂ ಅನೇಕ ಗ್ರಾಮೀಣ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಶಕ್ತಿ ನ್ಯೂಸ್ ಸಂಸ್ಥಾಪಕ ಹಾಗೂ ಸಂಪಾದಕ ಶ್ರೀ ಅನಿಲ್, ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯ ಎಂದರು. ಬಳಿಕ ಮಾತನಾಡಿದ ಮದನಾಯಕನಹಳ್ಳಿ ಗ್ರಾ.ಪಂ ಮಾಜಿ ಸದಸ್ಯೆ ಶ್ರೀಮತಿ ಮಂಗಳ, “ಗ್ರಾಮೀಣ ಮಹಿಳೆಯರು ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಸ್ವ ಉದ್ಯೋಗದಲ್ಲಿ ಮುನ್ನಡೆಯಬೇಕು” ಎಂದರು.
ಎನ್ಆರ್ಎಲ್ಎಂ (NRLM) ತಾಲ್ಲೂಕು ಫೆಡರೇಷನ್ ಅಧ್ಯಕ್ಷೆ ರೇಖಾ ಅವರು ಮಾತನಾಡಿ, “ಸ್ವಸಹಾಯ ಸಂಘಗಳ ಮಹಿಳೆಯರು ಕೌಶಲ್ಯಾಭಿವೃದ್ಧಿ ತರಬೇತಿಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು” ಎಂದು ಹೇಳಿದರು.
ಬಳಿಕ ತರಬೇತಿದಾರೆ ಶ್ರೀಮತಿ ಅಶ್ವಿನಿ ಅವರು ಮಾತನಾಡಿ, “ಈ ತರಬೇತಿಯ ಮೂಲಕ ಮಹಿಳೆಯರು ಸೋಪ್ ತಯಾರಿಕೆ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಯನ್ನು ಕಲಿತು ಸ್ವಂತ ಉದ್ಯಮ ಆರಂಭಿಸಬಹುದು” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಮ್ಯೂನಿಟಿ ಅಫೇರ್ಸ್ ಅಧಿಕಾರಿ ಶ್ರೀಮತಿ ಕರುಣಾ, ಕಾರ್ಯದರ್ಶಿ ಶ್ರೀ ಮತಿ ಹೇಮಾವತಿ, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಕ್ರಮವನ್ನು EDII ವತಿಯಿಂದಶ್ರೀ ಸಂತೋಷ್ ಅವರು ಸಂಯೋಜಿಸಿದ್ದಾರೆ.
ಈ ತರಬೇತಿಯಲ್ಲಿ ಸಾವಯವ ಸೋಪ್ ತಯಾರಿಕೆ, ಬಾಡಿ ಲೋಷನ್ ಮತ್ತು ಹ್ಯಾಂಡ್ ವಾಶ್ ತಯಾರಿಕೆ ಕುರಿತು ಪ್ರಾಯೋಗಿಕ ಹಾಗೂ ತಾಂತ್ರಿಕ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಮಹಿಳೆಯರಿಗೆ ಸ್ವ ಉದ್ಯೋಗ ಮತ್ತು ಆದಾಯ ವೃದ್ಧಿಗೆ ಉತ್ತಮ ಅವಕಾಶ ಒದಗಿಸುತ್ತದೆ

