ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಾಲಯ, ಸುಳ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ರಾಜ್ಯದ 14 ದೇವಾಲಯಗಳಲ್ಲಿ ʼಇ-ಪ್ರಸಾದʼ ಸೇವೆ ಆರಂಭಿಸಿದೆ. ಇನ್ನು ಮುಂದೆ ಭಕ್ತರು ಮನೆಯಲ್ಲೇ ಕುಳಿತುಕೊಂಡು ಪ್ರಸಾದವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು.
ದೇವಾಲಯಗಳಿಗೆ ತೆರಳಲು ಸಾಧ್ಯವಾಗದ ಭಕ್ತರು ಇನ್ನುಮುಂದೆ http:/ /www.csc.devalaya.com ವೆಬ್‌ಸೈಟ್ ಮೂಲಕ ಮನೆ ಬಾಗಿಲಿಗೆ ಪ್ರಸಾದವನ್ನು ತರಿಸಿಕೊಳ್ಳಬಹುದು. ʼಇ-ಪ್ರಸಾದʼ ಸೇವೆಯನ್ನು ಗುರುವಾರ ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಸಚಿವರು, ವಯಸ್ಸಾದವರು, ಅಂಗವಿಕಲರು, ಒಂಟಿ ಜೀವನ ಮಾಡುತ್ತಿರುವವರ ಸೇರಿದಂತ ಹಲವರಿಗೆ ದೇವಾಲಯಗಳಿಗೆ ಭೇಟಿ ನೀಡಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಇ-ಪ್ರಸಾದವನ್ನು ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಮನೆಯಲ್ಲಿ ಶುಭ ಸಮಾರಂಭಗಳು ಇದ್ದಾಗ ದೇವರ ಪ್ರಸಾದವನ್ನು ಮನೆಗೆ ತರಿಸಿಕೊಂಡು ಪೂಜೆ ಮಾಡುವ ಅವಕಾಶವನ್ನು ಧಾರ್ಮಿಕ ದತ್ತಿ ಇಲಾಖೆ ಕಲ್ಪಿಸಿದೆ ಎಂದು ಹೇಳಿದರು.
ನೋ ಲಾಸ್, ನೋ ಪ್ರಾಫಿಟ್‌ನಲ್ಲಿ 100 ರಿಂದ 200 ರೂ.ಗಳಲ್ಲಿ ಸೇವೆ ನೀಡಲಾಗುವುದು. ಈಗಾಗಲೇ ಪ್ರಾಯೋಗಿಕ ಪ್ರಸಾದ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಗಳಿಗೆ ಈ ಸೇವೆಯನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

