ಬೆಂಗಳೂರು: ಉತ್ತರ ವಿಭಾಗದ ಯಶವಂತಪುರ ಹಾಗೂ ನಂದಿನಿ ಲೇಔಟ್‌ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರು ಪೆಡ್ಲರ್‌ಗಳನ್ನು ಬಂಧಿಸಿ ₹20.10 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಸೈಯದ್ ಸುಹೇಲ್ (27), ಮೊಹಮ್ಮದ್ ಸಮೀರ್ (23), ಸಾದಿಕ್ ಪಾಷಾ (21), ಮೊಹಮ್ಮದ್ ಅಜರುಲ್‌ ಹಕ್ (33) ಮತ್ತು ಕೇರಳದ ಸೌಗೇಶ್ (27) ಹಾಗೂ ಅಲ್ತಾಫ್‌ (25) ಬಂಧಿತರು. ಬಂಧಿತರಿಂದ 8 ಕೆ.ಜಿ. 58 ಗ್ರಾಂ ಎಂಡಿಎಂಎ, 5 ಕೆ.ಜಿ. 700 ಗ್ರಾಂ ಹೈಡ್ರೋ ಗಾಂಜಾ, ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್‌ ಫೋನ್‌, ಒಂದು ಕಾರು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ತಿಳಿಸಿದರು.

ನೈಜೀರಿಯಾದ ಪೆಡ್ಲರ್‌ ಸಂಪರ್ಕಿಸಿ, ಅಲ್ಲಿಂದ ವಿವಿಧ ಮಾದರಿ ಮಾದಕ ವಸ್ತುಗಳನ್ನು ಆರೋಪಿಗಳು ತರಿಸಿಕೊಳ್ಳುತ್ತಿದ್ದರು. ಆ ಡ್ರಗ್ಸ್ ಅನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ರೌಡಿ ಶೀಟರ್ ಪಟ್ಟಿಯಲ್ಲಿ ಪ್ರಮುಖ ಆರೋಪಿ ಸೈಯದ್ ಸುಹೇಲ್ ಹೆಸರಿದೆ. ಡ್ರಗ್ಸ್ ಸಾಗಣೆ ಹಾಗೂ ಪೂರೈಕೆ ಸಂಬಂಧ ಈತನ ಮೇಲೆ ಐದು ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ವಿರುದ್ಧ ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್‌) ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.